Mysore
22
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಎಂ.ಎಸ್. ಧೋನಿಯೊಂದಿಗಿನ ಒಡನಾಟ ನೆನಪಿಸಿಕೊಂಡ ಶ್ರೀಶಾಂತ್ ಹಾಗೂ ಗಂಭೀರ್

ನವದೆಹಲಿ : ಎಂ.ಎಸ್. ಧೋನಿ ಭಾರತೀಯ ಕ್ರಿಕೆಟ್ ನ ಓರ್ವ ಯಶಸ್ವಿ ಆಟಗಾರ. ಸಾಂಪ್ರದಾಯಿಕವಲ್ಲದ ಕ್ರಿಕೆಟ್ ಕೇಂದ್ರದಿಂದ ವಿಶ್ವ ಕ್ರಿಕೆಟ್ ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿ ಬೆಳೆದು ನಿಂತಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ, ಧೋನಿ ಎರಡು ಕ್ರಿಕೆಟ್ ವಿಶ್ವಕಪ್ ಗಳನ್ನು ಗೆದ್ದರು. 2007ರಲ್ಲಿ ಟಿ-20 ಕ್ರಿಕೆಟ್ ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟರು.

ಈಗ ಮತ್ತೊಂದು ಕ್ರಿಕೆಟ್ ವಿಶ್ವಕಪ್ ಗೆ ದಿನಗಣನೆ ಆರಂಭವಾಗಿರುವಾಗ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎಂ.ಎಸ್. ಧೋನಿ ತಂಡದ ಯಶಸ್ಸನ್ನು ರೋಹಿತ್ ಶರ್ಮಾ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಅನುಕರಿಸಲಿ ಎಂದು ಆಶಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಶ್ರೀಶಾಂತ್ 2007 ರ ಟಿ20 ಕ್ರಿಕೆಟ್ ವಿಶ್ವಕಪ್ ಹಾಗೂ 2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಎರಡೂ ತಂಡಗಳ ಸದಸ್ಯರಾಗಿದ್ದರು.

ಧೋನಿ ಎಂದಿಗೂ ಪ್ರಚಾರ ಬಯಸಲಿಲ್ಲ: ಶ್ರೀಶಾಂತ್

ಇತ್ತೀಚೆಗೆ, Sportskeeda ದೊಂದಿಗೆ ಶ್ರೀಶಾಂತ್ ಅವರು ಎಂಎಸ್ ಧೋನಿಯ ಪಾತ್ರ ಮತ್ತು ಅವರ ಕೆಲಸದ ವಿಧಾನದ ಬಗ್ಗೆ ಮಾತನಾಡಿದರು.

“ನನಗೂ ಧೋನಿ ಭಾಯ್ ಅವರಿಗೂ ಭಿನ್ನಾಭಿಪ್ರಾಯಗಳಿದ್ದವು. ಆದರೆ ಈಗ ನಾನು ಕ್ರಿಕೆಟ್ ವಿಷಯಗಳ ಕಡೆ ನೋಡಿದಾಗ, ಧೋನಿ ಅವರನ್ನು ಬೆಂಬಲಿಸಲಿಲ್ಲ ಎಂದು ಯಾರೂ ಹೇಳಲಾರರು. ನಾಯಕನನ್ನು ಬೇರೆ ರೀತಿಯಲ್ಲಿ ಯೋಚಿಸುವಂತೆ ಮಾಡಿದ ಕೆಲವು ಸನ್ನಿವೇಶಗಳಿವೆ” ಎಂದರು.

ವಿಶ್ವಕಪ್ ಗೆಲುವಿನಲ್ಲಿ ನಾಯಕನಾಗಿ ಧೋನಿ ಪ್ರಭಾವವನ್ನು ವಿವರಿಸಿದ ಶ್ರೀಶಾಂತ್ , “ನಾನು ಇದನ್ನು ಹೇಳಿದಾಗ ಇದು ಸ್ವಲ್ಪ ವಿವಾದಾತ್ಮಕವಾಗಿರುತ್ತದೆ. ಹೌದು ನೀವು ಹೇಳಬಹುದು ‘ಕೇವಲ 2-3 ಆಟಗಾರರ ಬಗ್ಗೆ ಏಕೆ ಮಾತನಾಡಬೇಕು? ನಾವು ಕೂಡ ಗೆಲುವಿನಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಿದ್ದೇವೆ.’ ಧೋನಿ ಯಾವಾಗಲೂ ತಂಡದ ಬಗ್ಗೆ ಮೊದಲಿಗೆ ಯೋಚಿಸುತ್ತಾರೆ. ಅವರು ತಂಡದಲ್ಲಿನ ಹೊಸ ವ್ಯಕ್ತಿಗೆ ಕಪ್ ನೀಡುವ ಸಂಸ್ಕೃತಿಯನ್ನು ಸಹ ಆರಂಭಿಸಿದರು. ಅವರು ಎಂದಿಗೂ ಪ್ರಚಾರವನ್ನು ಬಯಸಲಿಲ್ಲ. ಅವರು ಯಾವಾಗಲೂ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಬಯಸುತ್ತಾರೆ,” ಎಂದು ಅವರುಹೇಳಿದರು.

“ಹೌದು ಪ್ರತಿಯೊಬ್ಬ ಆಟಗಾರನ ಕಠಿಣ ಪರಿಶ್ರಮದಿಂದ ನಾವು ವಿಶ್ವಕಪ್ ಗಳನ್ನು ಗೆದ್ದಿದ್ದೇವೆ. ಆದರೆ ಹಡಗಿನಲ್ಲಿ ಅನೇಕ ಸೆಲೆಬ್ರಿಟಿಗಳು ಇದ್ದರೂ, ಅದನ್ನು ಒಂದು ಗಮ್ಯಸ್ಥಾನದಿಂದ ಇನ್ನೊಂದಕ್ಕೆ ಕೊಂಡೊಯ್ಯುವ ಕೆಲಸವನ್ನು ಯಾವಾಗಲೂ ನಾಯಕನಿಂದ ಮಾಡಲಾಗುತ್ತದೆ ಎಂದರು.

ನಾಯಕತ್ವದ ಕಾರಣದಿಂದಾಗಿ ಧೋನಿ ತಮ್ಮಲ್ಲಿರುವ ಬ್ಯಾಟರ್ ಅನ್ನು ತ್ಯಾಗ ಮಾಡಿದರು:ಗಂಭೀರ್

ಎಂ.ಎಸ್. ಧೋನಿ ಅವರ ಮಾಜಿ ಸಹ ಆಟಗಾರರಾದ ಗೌತಮ್ ಗಂಭೀರ್, Star Sports ನಲ್ಲಿ ಇತ್ತೀಚಿನ ಸಂವಾದದಲ್ಲಿ, ಎಂ.ಎಸ್. ಧೋನಿ ತಮ್ಮ ಬ್ಯಾಟಿಂಗ್ ಸ್ಥಾನವನ್ನು ತಂಡದ ಸಲುವಾಗಿ ಹೇಗೆ “ತ್ಯಾಗ” ಮಾಡಿದರು ಎಂದು ವಿವರಿಸಿದರು. ಅವರು ಹಾಗೇ ಮಾಡದಿರುತ್ತಿದ್ದರೆ ಈಗ ಭಾರತದ ನಂಬರ್ 3 ಬ್ಯಾಟರ್ ಆಗುತ್ತಿದ್ದರು ಎಂದರು.

“ಎಂ.ಎಸ್. (ಧೋನಿ) ಅವರು ತಮ್ಮ ಬ್ಯಾಟಿಂಗ್ ನಿಂದ ಆಟವನ್ನು ಬದಲಾಯಿಸಬಲ್ಲ ಭಾರತದ ಮೊದಲ ವಿಕೆಟ್ ಕೀಪರ್‌ ಆಗಿದ್ದರು. ಧೋನಿಯಂತಹ ವಿಕೆಟ್ ಕೀಪರ್‌ ಬ್ಯಾಟರ್ ಆಗಿರುವುದು ಭಾರತದ ಸೌಭಾಗ್ಯ. ನಾವು 7ನೇ ಕ್ರಮಾಂಕದಿಂದ ಪಂದ್ಯಗಳನ್ನು ಗೆಲ್ಲಬಲ್ಲ ವಿಕೆಟ್ ಕೀಪರ್‌-ಬ್ಯಾಟರ್ ಅನ್ನು ಹೊಂದಿದ್ದೇವೆ, ಏಕೆಂದರೆ ಅವರು ಆ ಪವರ್ ಗೇಮ್ ಹೊಂದಿದ್ದರು. ಧೋನಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರೆ, ಅವರು ಹಲವಾರು ಏಕದಿನ ದಾಖಲೆಗಳನ್ನು ಮುರಿಯುತ್ತಿದ್ದರು ಎಂಬ ಬಗ್ಗೆ ನನಗೆ ಖಾತ್ರಿಯಿದೆ” ಎಂದು ಗಂಭೀರ್ ಹೇಳಿದ್ದಾರೆ.

“ಜನರು ಯಾವಾಗಲೂ ಎಂ.ಎಸ್. ಧೋನಿ ಹಾಗೂ ನಾಯಕನಾಗಿ ಅವರ ಸಾಧನೆಗಳ ಬಗ್ಗೆ ಮಾತನಾಡುತ್ತಾರೆ, ಇದು ಸಂಪೂರ್ಣವಾಗಿ ನಿಜ. ಆದರೆ ನಾಯಕತ್ವದ ಕಾರಣದಿಂದಾಗಿ ಅವರು ತಮ್ಮಲ್ಲಿರುವ ಬ್ಯಾಟರ್ ಅನ್ನು ತ್ಯಾಗ ಮಾಡಿದರು ಮತ್ತು ಅವರು ಬ್ಯಾಟಿಂಗ್‌ನಿಂದ ಇನ್ನೂ ಹೆಚ್ಚಿನದನ್ನು ಸಾಧಿಸಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ನೀವು ನಾಯಕರಾಗಿದ್ದಾಗ ಹೀಗಾಗುತ್ತದೆ. ಏಕೆಂದರೆ ನೀವು ತಂಡವನ್ನು ಮುಂದಿಟ್ಟಿದ್ದೀರಿ ಹಾಗೂ ನಿಮ್ಮ ಬಗ್ಗೆ ನೀವು ಮರೆತುಬಿಡುತ್ತೀರಿ. ಧೋನಿ ಅವರು 6 ಅಥವಾ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಆರಂಭಿಸಿದರು. ಅವರು ನಾಯಕನಾಗಿರದಿದ್ದರೆ, ಅವರು ಭಾರತದ ನಂಬರ್ 3 ಬ್ಯಾಟರ್ ಆಗುತ್ತಿದ್ದರು ಅವರು ಈಗ ಗಳಿಸಿದ್ದಕ್ಕಿಂತ ಹೆಚ್ಚು ಸ್ಕೋರ್ ಮಾಡುತ್ತಿದ್ದರು. ಹೆಚ್ಚು ಶತಕಗಳನ್ನು ಗಳಿಸಬಹುದಿತ್ತು ”ಎಂದು ಗಂಭೀರ್ ಹೇಳಿದರು.

ಮೂರು ಪ್ರಮುಖ ಐಸಿಸಿ ಪ್ರಶಸ್ತಿ ಗೆಲ್ಲುವಲ್ಲಿ ತಂಡವನ್ನು ಮುನ್ನಡೆಸಿರುವ ಧೋನಿ ಭಾರತದ ಶ್ರೇಷ್ಠ ನಾಯಕರಾಗಿದ್ದಾರೆ. ಒಟ್ಟಾರೆಯಾಗಿ, ಅವರು ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಂತ ಹೆಚ್ಚು ಪಂದ್ಯಗಳಲ್ಲಿ(332) ಭಾರತವನ್ನು ನಾಯಕನಾಗಿ ಮುನ್ನಡೆಸಿದ್ದರು, ಈ ಪೈಕಿ 178ರಲ್ಲಿ ಗೆಲುವು, , 120ರಲ್ಲಿ ಸೋಲು ಕಂಡಿದ್ದಾರೆ, 6ರಲ್ಲಿ ಟೈ ಮತ್ತು 15ರಲ್ಲಿ ಯಾವುದೇ ಫಲಿತಾಂಶವಿಲ್ಲದೇ ಕೊನೆಗೊಂಡಿತು.

ನಾಯಕನಾಗಿ ಅವರ ಗೆಲುವಿನ ಶೇಕಡಾವಾರು 53.61 ಆಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ