ಹೊಸದಿಲ್ಲಿ: ಮೊನ್ನೆಯಷ್ಟೇ ( ಸೆಪ್ಟೆಂಬರ್ 8 ) ಮುಕ್ತಾಯಗೊಂಡ 2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪರ ಪದಕಗಳನ್ನು ಗೆದ್ದ ಕ್ರೀಡಾಪಟುಗಳಿಗೆ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಇಂದು ( ಸೆಪ್ಟೆಂಬರ್ 10 ) ನಡೆದ ಅಭಿನಂದನಾ ಸಮಾರಂಭದಲ್ಲಿ ನಗದು ಬಹುಮಾನವನ್ನು ಘೋಷಿಸಿದರು.
ಪ್ಯಾರಾಲಿಂಪಿಕ್ಸ್ ಕ್ರೀಡೆಗಳಲ್ಲಿ ಚಿನ್ನ ಗೆದ್ದ ಕ್ರೀಡಾಪಟುಗಳಿಗೆ 75 ಲಕ್ಷ ರೂ, ಬೆಳ್ಳಿ ಗೆದ್ದವರಿಗೆ 50 ಲಕ್ಷ ರೂ ಮತ್ತು ಕಂಚಿನ ಪದಕಗಳನ್ನು ಗೆದ್ದ ಕ್ರೀಡಾಪಟುಗಳಿಗೆ 30 ಲಕ್ಷ ರೂಪಾಯಿ ನಗದು ಬಹುಮಾನವನ್ನಾಗಿ ವಿತರಿಸಿ ಗೌರವಿಸಲಾಗುವುದು ಎಂದು ತಿಳಿಸಿದರು. ಇನ್ನು ಮಿಶ್ರ ತಂಡವಾಗಿ ಕಂಚಿನ ಪದಕ ಗೆದ್ದವರಿಗೆ ತಲಾ 22.5 ಲಕ್ಷ ರೂಪಾಯಿಗಳನ್ನು ಬಹುಮಾನವನ್ನಾಗಿ ನೀಡಲಾಗುವುದು.
ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಒಟ್ಟು 29 ಪದಕಗಳನ್ನು ಗೆದ್ದು ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಶ್ರೇಷ್ಠ ಸಾಧನೆಯನ್ನು ಮಾಡಿದೆ.