Mysore
20
overcast clouds
Light
Dark

ICC t20 worldcup 2024: ಅಫ್ಘನ್‌ ಮಣಿಸಿ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದ ದಕ್ಷಿಣ ಆಫ್ರಿಕಾ!

ಟ್ರಿನಿಡಾಡ್‌: ದಕ್ಷಿಣ ಆಫ್ರಿಕಾ ತಂಡದ ಕರಾರುವಕ್ಕಾದ ಬೌಲಿಂಗ್‌ ದಾಳಿಗೆ ನಲುಗಿದ ಅಫ್ಘಾನಿಸ್ತಾನ ತಂಡ ಟಿ20 ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಹೀನಾಯ ಸೋಲು ಕಂಡಿತು.

ಅಫ್ಘಾನ್‌ ವಿರುದ್ಧ 9 ವಿಕೆಟ್‌ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ ದಕ್ಷಿಣ ಆಫ್ರಿಕಾ ತಂಡ ಟಿ20 ವಿಶ್ವಕಪ್‌ ಟೂರ್ನಿ ಇತಿಹಾಸದಲ್ಲಿ ಮೊದಲ ಬಾರಿಗೆ ಸೆಮಿ ಫೈನಲ್‌ ಪ್ರವೇಶಿಸಿ ದಾಖಲೆ ಬರೆಯಿತು.

ಇಲ್ಲಿನ ಬ್ರಯಾನ್‌ ಲಾರಾ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ್‌ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಅಫ್ಘಾನಿಸ್ತಾನ್‌ 11.5 ಓವರ್‌ಗಳಲ್ಲಿ ಆಲ್‌ಔಟ್‌ ಆಗುವ ಮೂಲಕ ಕೇವಲ 56ರನ್‌ ಗಳಿಸಿ ಎದುರಾಳಿಗೆ 57ರನ್‌ಗಳ ಗುರಿ ನೀಡಿತು. ಈ ಸಾದಾರಣ ಮೊತ್ತ ಬೆನ್ನತ್ತಿದ ದ.ಆಫ್ರಿಕಾ 8.5 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 60 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ಅಫ್ಘಾನ್‌ ಇನ್ನಿಂಗ್ಸ್‌: ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಅಫ್ಘಾನ್‌ ಪರ ಗುರ್ಬಾಜ್‌ ಹಾಗೂ ಇಬ್ರಾಹಿಂ ಜದ್ರಾನ್‌ ಆರಂಭಿಕರಾಗಿ ಕಣಕ್ಕಿಳಿದರು. ಮಾರ್ಕೋ ಎನ್ಸನ್‌ ಮೊದಲ ಓವರ್‌ನಲ್ಲೇ ಗುರ್ಬಾಜ್‌ ಡಕ್‌ಔಟ್‌ ಆಗಿ ಹೊರ ನಡೆದರು. ಬಳಿಕ ಬಂದ ರಬಾಡ 2(5)ರನ್‌ ಬಾರಿಸಿದ್ದ ಜದ್ರಾನ್‌ರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು.

ಬಳಿಕ ಬಂದ ಗುಲ್ಬದಿನ್‌ ನೈಬ್‌ 9(8) ರನ್‌ ಹಾಗೂ ಅಜರತ್ತುಲ್ಲಾ 10(12)ರನ್‌ ಗಳಿಸಿ ಔಟಾದರು. ಅಜರತ್ತುಲ್ಲಾ ಗಳಿಸಿದ್ದೇ ತಂಡದ ಪರ ಅತ್ಯಧಿಕ ರನ್‌ ಆಗಿತ್ತು. ಬಳಿಕ ಬಂದ ಬೇರಾವ ಆಟಗಾರರಿಂದಲೂ ದಕ್ಷಿಣ ಆಫ್ರಿಕಾ ತಂಡದ ಬಿಗಿ ಬೌಲಿಂಗ್‌ ಮುಂದೆ ನಿಂತು ಇನ್ನಿಗ್ಸ್‌ ಕಟ್ಟಲಾಗಲಿಲ್ಲ.

ಉಳಿದಂತೆ ನಬಿ ಡಕ್‌ಔಟ್‌, ಖರೋಟ್ಟೆ 2(7)ರನ್‌, ಜನತ್‌ 8(13) ರನ್‌, ನಾಯಕ ರಶೀದ್‌ ಖಾನ್‌ 8(8) ರನ್‌, ನೂರ್‌ ಅಹ್ಮದ್‌ ಡಕ್‌ಔಟ್‌, ನವೀನ್‌ ಉಲ್‌-ಹಕ್‌ 2(8)ರನ್‌ ಗಳಿಸಿದರೇ, ಫರೂಕಿ ಔಟಾಗದೇ 2(2)ರನ್‌ ಗಳಿಸಿದರು.

ದಕ್ಷಿಣ ಆಫ್ರಿಕಾ ಪರ ಮಾರ್ಕೋ ಎನ್ಸನ್‌ ಹಾಗೂ ಸಂಶಿ ತಲಾ 3 ವಿಕೆಟ್‌, ನೋಕಿಯೋ ಮತ್ತು ರಬಾಡ ತಲಾ 2 ವಿಕೆಟ್‌ ಕಬಳಿಸಿ ಮಿಂಚಿದರು.

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌: ಈ ಸಾದಾರಣ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಕೇವಲ 8.5 ಓವರ್‌ಗಳಲ್ಲಿ 60ರನ್‌ ಗಳಿಸಿ 9 ವಿಕೆಟ್‌ಗಳ ಅಂತರದಿಂದ ಭರ್ಜರಿಯಾಗಿ ಗೆಲುವು ದಾಖಲಿಸಿತು. ತಂಡದ ಪರ ಡಿಕಾಕ್‌ 5(8)ರನ್‌, ಹೆನ್ರಿಕ್ಸ್‌ ಔಟಾಗದೇ 29(25)ರನ್‌ ಹಾಗೂ ನಾಯಕ ಐಡೆನ್‌ ಮಾರ್ಕ್ರಂ ಔಟಾಗದೇ 23(21)ರನ್‌ ಗಳಿಸಿದರು.

ಅಫ್ಘಾನ್‌ ಪರ ಫರೂಕಿ ಒಂದು ವಿಕೆಟ್‌ ಪಡೆದರು.

ಪಂದ್ಯ ಶ್ರೇಷ್ಠ: ಮಾರ್ಕೋ ಎನ್ಸನ್‌