ಹೊಸದಿಲ್ಲಿ : ದಕ್ಷಿಣ ಆಫ್ರಿಕಾ ಟ್ವೆಂಟಿ-20 ಕ್ರಿಕೆಟ್‌ನ್ ಫ್ರಾಂಚೈಸಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ನೇಮಕಗೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಸೌರವ್ ಗಂಗೂಲಿ ಮುಖ್ಯ ಕೋಚ್ ಆಗಿ ತರಬೇತಿ ನೀಡಲಿದ್ದಾರೆ. ವೃತ್ತಿಪರ ಕ್ರಿಕೆಟ್ ತಂಡದೊಂದಿಗೆ ಗಂಗೂಲಿಯ ಮೊದಲ ಪೂರ್ಣ ಸಮಯದ ತರಬೇತಿ ಅನುಭವ ಇದಾಗಿದೆ.
ಪ್ರಿಟೋರಿಯಾ ಕ್ಯಾಪಿಟಲ್ಸ್ ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಗಂಗೂಲಿ ಅವರ ನೇಮಕಾತಿಯನ್ನು ಅಧಿಕೃತವಾಗಿ ಘೋಷಿಸಿದೆ. ‘ಕೋಲ್ಕತ್ತಾ ರಾಜಕುಮಾರರಿಗೆ ಹೊಸ ಆರಂಭ. ಸೌರವ್ ಗಂಗೂಲಿಯನ್ನು ನಮ್ಮ ಹೊಸ ಮುಖ್ಯ ಕೋಚ್ ಆಗಿ ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದೆ.
ಕಳೆದ ಆವೃತ್ತಿಯಲ್ಲಿ ತಂಡದ ಉಸ್ತುವಾರಿ ವಹಿಸಿಕೊಂಡಿದ್ದ ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಜೊನಾಥನ್ ಟ್ರಾಟ್ ಕೋಚ್ ಹುದ್ದೆಯಿಂದ ಕೆಳಗಿಳಿದ ಒಂದು ದಿನದ ನಂತರ ಗಂಗೂಲಿ ಅವರ ನೇಮಕವಾಗಿದೆ. ಈಗ ಸೌರವ್ ಗಂಗೂಲಿ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.





