ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) 2024ನೇ ಸಾಲಿನ ವರ್ಷದ ಮಹಿಳಾ ಏಕದಿನ ಕ್ರಿಕೆಟರ್ ಪ್ರಶಸ್ತಿಗೆ ಭಾರತದ ಮಹಿಳಾ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ ಭಾಜನರಾಗಿದ್ದಾರೆ.
2024ರ ವರ್ಷದ ಏಕದಿನ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗುವ ಮೂಲಕ ತಮ್ಮ ವೃತ್ತಿ ಬದುಕಿನಲ್ಲಿ 4ನೇ ಐಸಿಸಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.
ಕಳೆದ ವರ್ಷ ಏಕದಿನ ಕ್ರಿಕೆಟ್‌ನಲ್ಲಿ 13 ಇನ್ನಿಂಗ್ಸ್‌ಗಳನ್ನು ಆಡಿದ ಮಂದಾನ 4 ಭರ್ಜರಿ ಶತಕಗಳೊಂದಿಗೆ ಒಟ್ಟು 747 ರನ್ ಕಲಾಹಾಕಿದ್ದರು. ಆ ಮೂಲಕ ವರ್ಷದ ಏಕದಿನ ಮಾದರಿಯಲ್ಲಿ ಅತ್ಯಧಿಕ ರನ್ ಕಲೆ ಹಾಕಿದ ಮಹಿಳಾ ಕ್ರಿಕೆಟರ್‌ಗಳ ಸಾಲಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದರು.
ಇದಕ್ಕೂ ಮುನ್ನ 2018ರಲ್ಲಿ ಮೊದಲ ಬಾರಿಗೆ ವರ್ಷದ ಏಕದಿನ ಕ್ರಿಕೆಟರ್ ಪ್ರಶಸ್ತಿ ಗೆದ್ದಿದ್ದ ಮಂದಾನ, ಅದೇ ವರ್ಷ 2018ರ ಮಹಿಳಾ ಕ್ರಿಕೆಟರ್ ಗೌರವಕ್ಕೂ ಭಾಜನರಾಗಿದ್ದರು. ನಂತರ 2021 ಮತ್ತು ಈಗ 2024ರಲ್ಲಿ ವರ್ಷದ ಮಹಿಳಾ ಏಕದಿನ ಕ್ರಿಕೆಟರ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.





