ಹೊಸದಿಲ್ಲಿ : ಭಾರತ ತಂಡದ ಎಡಗೈ ಆರಂಭಿಕ ಬ್ಯಾಟರ್ ಹಾಗೂ ವನಿತೆಯರ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಗಳಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 17 ಪಂದ್ಯಗಳಿಂದ 982 ರನ್ ಗಳಿಸಿದ್ದ ಮಂಧಾನ, ಭಾನುವಾರದ ಆಸೀಸ್ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದಲ್ಲಿ 18 ರನ್ ಪೂರ್ತಿಗೊಳಿಸುತ್ತಿದ್ದಂತೆ ಈ ಮೈಲುಗಲ್ಲು ಸಾಧಿಸಿದರು.
ಮಂಧಾನಗೆ ವಿಶ್ವಕಪ್‌ನ ಈವರೆಗಿನ ಪಂದ್ಯಾವಳಿ ಉತ್ತಮವಾಗಿರಲಿಲ್ಲ. ಮೊದಲ ಮೂರು ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದರು. ಶ್ರೀಲಂಕಾ ವಿರುದ್ಧ 8, ಪಾಕಿಸ್ತಾನ ವಿರುದ್ಧ 23, ದಕ್ಷಿಣ ಆಫ್ರಿಕಾ ವಿರುದ್ಧ, 23 ರನ್ ಗಳಿಸಿದ್ದರು. ಆದರೆ ಆಸೀಸ್ ವಿರುದ್ಧ ಉತ್ತಮ ಬ್ಯಾಟಿಂಗ್ ನಡೆಸಿ ಮತ್ತೆ ಹಳೆಯ ಲಯಕ್ಕೆ ಮರಳಿದ್ದಾರೆ. 66 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 80 ರನ್ ಗಳಿಸಿ ಅರ್ಧಶತಕ ಪೂರ್ತಿಗೊಳಿಸಿದರು.
ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಂಧಾನ, ಕ್ಯಾಲೆಂಡರ್ ವರ್ಷದಲ್ಲಿ ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹಿಂದಿನ ದಾಖಲೆಯನ್ನು ಮುರಿದ್ದರು. ಇದೀಗ ಸಾವಿರ ರನ್ ಪೂರೈಸಿದ್ದಾರೆ.





