Mysore
21
mist

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಅದೃಷ್ಟದಾಟದಲ್ಲಿ ಸೆಮಿಫೈನಲ್‌ ಗೆ ಲಗ್ಗೆ ಇಟ್ಟ ಪಾಕ್

ನೆದರ್ಲೆಂಡ್ ವಿರುದ್ಧ ಸೋತು ಪಾಕ್ಗೆ ಅವಕಾಶದ ಬಾಗಿಲು ತೆರೆದ ದ. ಆಫ್ರಿಕಾ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದ ‘ಬಿ’ ಗುಂಪಿನ ಇಂದಿನ ಪಂದ್ಯಗಳು ರೋಚಕ ತಿರುವಿಗೆ ಕಾರಣವಾಗಿದ್ದು, ಆರಂಭಿಕ ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ಪಾಕಿಸ್ತಾನ ಎರಡನೇ ತಂಡವಾಗಿ ಸೆಮಿಫೈನಲ್ಸ್ಗೆ ಅರ್ಹತೆ ಪಡೆದುಕೊಂಡಿದೆ. ನೆದರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲುವುದರೊಂದಿಗೆ ಪಾಕಿಸ್ತಾನಕ್ಕೆ ಸೆಮಿ ಫೈನಲ್‌ ಬಾಗಿಲು ತೆರೆದುಕೊಂಡಿತು.
ಆರಂಭದಲ್ಲಿ ಎರಡು ಪಂದ್ಯಗಳನ್ನು ಸೋತು ಸ್ಪರ್ಧೆಯಿಂದ ಹೊರ ಬೀಳುವ ಸ್ಥಿತಿಗೆ ತಲುಪಿದ್ದ ಪಾಕಿಸ್ತಾನ ಹ್ಯಾಟ್ರಿಕ್ ಗೆಲುವಿನೊಂದಿಗೆ ಅಂತಿಮ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆಯುವ ಮೂಲಕ ಎಲ್ಲರನ್ನು ಚಕಿತಗೊಳಿಸಿದೆ.

ಅಡಿಲೇಡ್ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ತಂಡದ ಆರಂಭಿಕ ಆಟಗಾರ ನಜ್ಮುಲ್ ಹುಸೇನ್ ಶಾಂತೊ (54) ಅವರ ಅರ್ಧಶತಕದೊಂದಿಗೆ ದೊಡ್ಡ ಮೊತ್ತದ ಕಡೆಗೆ ಮುನ್ನಡೆದಿತ್ತು. ಆದರೆ, ಕೊನೆಯ 5 ಓವರ್ಗಳಲ್ಲಿ ಹೀನಾಯ ಬ್ಯಾಟಿಂಗ್ ಪ್ರದರ್ಶನದಿಂದಾಗಿ 20 ಓವರ್ಗಳಲ್ಲಿ 8 ವಿಕೆಟ್ಗೆ 127 ರನ್ಗಳಿಸಲಷ್ಟೇ ಬಾಂಗ್ಲಾ ಶಕ್ತವಾಯಿತು.

ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಆರಂಭದಲ್ಲೇ ಬಾಬರ್ ಆಝಮ್ ವಿಕೆಟ್ ಕಳೆದುಕೊಳ್ಳಬೇಕಿತ್ತು. ಆದರೆ, ಬಾಂಗ್ಲಾ ವಿಕೆಟ್ಕೀಪರ್ ನೂರುಲ್ ಹಸನ್ ಸುಲಭದ ಕ್ಯಾಚ್ ಕೈಚೆಲ್ಲಿ ಪಾಕ್ ಕ್ಯಾಪ್ಟನ್ಗೆ ಜೀವದಾನ ನೀಡಿದರು. ಇದರ ಲಾಭ ಪಡೆದ ಬಾಬರ್ (25) ಮತ್ತೊಬ್ಬ ಆರಂಭಿಕ ಆಟಗಾರ ಮೊಹಮ್ಮದ್ ರಿಝ್ವಾನ್ (32) ಜತೆ ಮೊದಲ ವಿಕೆಟ್ಗೆ 57 ರನ್ಗಳ ಜೊತೆಯಾಟವಾಡಿ ಭದ್ರ ಅಡಿಪಾಯ ಹಾಕಿದರು. ಬಳಿಕ ಮೊಹಮ್ಮದ್ ಹ್ಯಾರಿಸ್ (31) ಮತ್ತು ಶಾನ್ ಮಸೂದ್ (ಅಜೇಯ 24) ದಿಟ್ಟ ಆಟವಾಡಿ ಪಾಕ್ಗೆ ಜಯ ತಂದಿತ್ತರು.
ದಕ್ಷಿಣ ಆಫ್ರಿಕಾ ತಂಡ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಕ್ರಿಕೆಟ್ ಕೂಸು ನೆದರ್ಲೆಂಡ್ಸ್ ವಿರುದ್ಧ ಸೋತಿದ್ದು ಪಾಕಿಗೆ ವರವಾಯಿತು. ಸೆಮಿಫೈನಲ್ಸ್ ಹಂತದಲ್ಲಿ ಭಾರತ-ಪಾಕಿಸ್ತಾನ ತಂಡಗಳಿಗೆ ಯಶಸ್ಸು ಸಿಕ್ಕರೆ, ನವೆಂಬರ್ 13ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ನಲ್ಲಿ ಎರಡೂ ತಂಡಗಳು ಮುಖಾಮುಖಿ ಆಗುವ ಸಾಧ್ಯತೆ ಇದೆ.

ಪಾಕಿಸ್ತಾನ ತಂಡದ ಪರ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಅನುಭವಿ ಎಡಗೈ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ, ತಮ್ಮ 4 ಓವರ್ಗಳಲ್ಲಿ 22ಕ್ಕೆ 4 ವಿಕೆಟ್ ಪಡೆಯುವ ಮೂಲಕ ಬಾಂಗ್ಲಾ ಬ್ಯಾಟಿಂಗ್ ಸದ್ದಡಗಿಸಿದರು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಶಾಹೀನ್ ಶಾ ಅಫ್ರಿದಿ ಅವರ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ. ಸೆಮಿಫೈನಲ್ಸ್ಗೂ ಮುನ್ನ ಶಾಹೀನ್ ಶ್ರೇಷ್ಠ ಲಯಕ್ಕೆ ಮರಳಿರುವುದು ಪಾಕಿಸ್ತಾನ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಹೀಗಾಗಿ ಅತ್ಯಂತ ಅಪಾಯಕಾರಿ ತಂಡವಾಗಿ ಪಾಕ್ ನಾಕ್ಔಟ್ ಹಂತಕ್ಕೆ ಕಾಲಿಟ್ಟಿದೆ. ಅಂತಿಮ ನಾಲ್ಕರ ಘಟ್ಟದಲ್ಲಿ ಪಾಕಿಸ್ತಾನ ತಂಡ ‘ಎ’ ಗುಂಪಿನ ಅಗ್ರಸ್ಥಾನಿ ನ್ಯೂಜಿಲೆಂಡ್ ವಿರುದ್ಧ ಪೈಪೋಟಿ ನಡೆಸಲಿದೆ.

ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ: 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 127 ರನ್ (ನಜ್ಮುಲ್ ಹುಸೇನ್ ಶಾಂತೊ 54, ಸೌಮ್ಯ ಸರ್ಕಾರ್ 20, ಆಫಿಫ್ ಹುಸೇನ್ 24*; ಶಾಹೀನ್ ಶಾ ಅಫ್ರಿದಿ 22ಕ್ಕೆ 4, ಶದಾಬ್ ಖಾನ್ 30ಕ್ಕೆ 2).

ಪಾಕಿಸ್ತಾನ: 18.1 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 128 ರನ್ (ಮೊಹಮ್ಮದ್ ರಿಝ್ವಾನ್ 32, ಬಾಬರ್ ಆಝಮ್ 25, ಮೊಹಮ್ಮದ್ ಹ್ಯಾರಿಸ್ 31, ಶಾನ್ ಮಸೂದ್ 24*; ನಸುಮ್ ಅಹ್ಮದ್ 14ಕ್ಕೆ 1, ಮುಸ್ತಾಫಿಝುರ್ ರೆಹಮಾನ್ 21ಕ್ಕೆ 1, ಇಬಾದತ್ ಹುಸೇನ್ 25ಕ್ಕೆ 1).
ಪಂದ್ಯಶ್ರೇಷ್ಠ: ಶಾಹೀನ್ ಶಾ ಅಫ್ರಿದಿ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!