ಬಾರ್ಬಡೋಸ್ (ವೆಸ್ಟ್ ಇಂಡೀಸ್): ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ಆ ಮೂಲಕ ಪಂದ್ಯ ಗೆದ್ದ ವೆಸ್ಟ್ ಇಂಡೀಸ್ ಏಕದಿನ ಸರಣಿಯನ್ನು 1-1 ಸಮಬಲ ಕಾಯ್ದುಕೊಂಡಿದೆ.
ಶನಿವಾರ ಇಲ್ಲಿನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಭಾರತ ನೀಡಿದ್ದ ಕೇವಲ 182 ರನ್ ಗುರಿ ಹಿಂಬಾಲಿಸಿದ ವೆಸ್ಟ್ ಇಂಡೀಸ್ ತಂಡದ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಮುಂಚೂಣಿಯಲ್ಲಿ ನಿಂತು ಬ್ಯಾಟ್ ಮಾಡಿದ ನಾಯಕ ಶೇಯ್ ಹೋಪ್ 80 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿ ಗಳೊಂದಿಗೆ ಅಜೇಯ 63 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ ಕೀಸಿ ಕಾರ್ಟಿ ಅಜೇಯ 45 ರನ್ ಗಳಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡಕ್ಕೆ ಓಪನರ್ಸ್ ಇಶಾನ್ ಕಿಶನ್ (55) ಹಾಗೂ ಶುಭಮನ್ ಗಿಲ್ (34) ಮೊದಲನೇ ವಿಕೆಟ್‌ಗೆ 90 ರನ್ ಕಲೆ ಹಾಕುವ ಮೂಲಕ ಭರ್ಜರಿ ಆರಂಭ ತಂದುಕೊಟ್ಟಿದ್ದರು. ಆದರೆ, ಒಮ್ಮೆ ಶುಭಮನ್ ಗಿಲ್ ಹಾಗೂ ಇಶಾನ್ ಕಿಶನ್ ವಿಕೆಟ್ ಒಪ್ಪಿಸಿದ ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಕೇವಲ 23 ರನ್‌ಗಳ ಅಂತರದಲ್ಲಿ ಭಾರತ ತಂಡ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿತು.
ಸಂಜು ಸ್ಯಾಮ್ಸನ್ (9), ಅಕ್ಷರ್ ಪಟೇಲ್ (1) ಹಾಗೂ ಹಾರ್ದಿಕ್ ಪಾಂಡ್ಯ (7) ಎರಡಂಕಿ ವೈಯಕ್ತಿಕ ಮೊತ್ತ ಕಲೆ ಹಾಕುವಲ್ಲಿ ವಿಫಲರಾದರು. 24 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದ ಸೂರ್ಯಕುಮಾರ್ ಯಾದವ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ರವೀಂದ್ರ ಜಡೇಜಾ (10) ಹಾಗೂ ಶಾರ್ದುಲ್ (16) ಸಹ ನಿರಾಶೆ ಮೂಡಿಸಿದರು. ಅಂತಿಮವಾಗಿ ಭಾರತ ತಂಡ 40.5 ಓವರ್‌ಗಳಿಗೆ 181 ರನ್‌ಗಳಿಗೆ ಆಲ್‌ಔಟ್ ಆಯಿತು.
ವೆಸ್ಟ್ ಇಂಡೀಸ್ ಪರ ಗುಡಕೇಶ್ ಮೋಥಿ ಹಾಗೂ ರೊಮಾರಿಯೊ ಶೆಫರ್ಡ್ ತಲಾ 3 ವಿಕೆಟ್‌ಗಳನ್ನು ಕಬಳಿಸಿದರು. ಅಲ್ಝಾರಿ ಜೋಸೆಪ್ ಎರಡು ವಿಕೆಟ್ ಕಿತ್ತರು.
ಸ್ಕೋರ್ ವಿವರ
ಭಾರತ: 40.5 ಓವರ್‌ಗಳಿಗೆ 181-10 (ಇಶಾನ್ ಕಿಶನ್ 55, ಶುಭಮನ್ ಗಿಲ್ 34, ಸೂರ್ಯಕುಮಾರ್ ಯಾದವ್ 24; ಗುಡಕೇಶ್ ಮೋಥಿ 36ಕ್ಕೆ 3, ರೊಮಾರಿಯೊ ಶೆಫರ್ಡ್ 37ಕ್ಕೆ 3
ವೆಸ್ಟ್ ಇಂಡೀಸ್: 36.4 ಓವರ್‌ಗಳಿಗೆ 182-4 (ಶೇಯ್ ಹೋಪ್ 63*, ಕೀಸಿ ಕಾರ್ಟಿ 48*, ಕೈಲ್ ಮೇಯರ್ಸ್ 36; ಶಾರ್ದುಲ್ ಠಾಕೂರ್ 42ಕ್ಕೆ 3)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಶೇಯ್ ಹೋಪ್