ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನೇಳನೇ ಆವೃತ್ತಿ ಆರಂಭಕ್ಕೆ ಈಗಾಗಲೇ ಮುಹೂರ್ತ ನಿಗದಿಯಾಗಿದ್ದು, ವಿವಿಧ ತಂಡಗಳು ತಮ್ಮ ತಮ್ಮ ತಾಲೀಮು ಶುರುವಿಟ್ಟುಕೊಂಡಿವೆ. ಮತ್ತೊಂದು ಹೊಸ ಆವೃತ್ತಿಗಾಗಿ ತಂಡದಲ್ಲಿ ಹೊಸತನವನ್ನು ತರುತ್ತಿವೆ.
ಇನ್ನು ಐಪಿಎಲ್‌ನಲ್ಲಿ ಅತಿದೊಡ್ಡ ಅಭಿಮಾನಿ ಬಳಗವಿರುವ ಆರ್‌ಸಿಬಿ ತಂಡ ಈ ಬಾರಿಯೂ ಸಹ ತನ್ನ ಅನ್‌ಬಾಕ್ಸ್ ಕಾರ್ಯಕ್ರಮವನ್ನು ಏರ್ಪಡಿಸಿದೆ. ಈ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರಲಿದೆ ಹಾಗೂ ಏನೆಲ್ಲಾ ಹೊಸತನ ಬರಲಿದೆ ಎಂದು ಅಭಿಮಾನಿಗಳು ಕಾತರರಾಗಿದ್ದಾರೆ.
ಹೀಗಿರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅನ್‌ಬಾಕ್ಸ್ ಕಾರ್ಯಕ್ರಮಕ್ಕೂ ಮುನ್ನವೇ ವಿಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಬಾರಿ ತನ್ನ ಹೆಸರಿನಲ್ಲಿರುವ ಬ್ಯಾಂಗ್ಳೋರ್ ಅನ್ನು ʼಬೆಂಗಳೂರುʼ ಎಂದು ಬದಲಿಸುವ ಮುನ್ಸೂಚನೆಯನ್ನು ನೀಡಿದೆ. ಹೌದು, ರಿಷಬ್ ಶೆಟ್ಟಿ ಈ ಪ್ರೊಮೊದಲ್ಲಿ ಕಾಣಿಸಿಕೊಂಡಿದ್ದು, ಬ್ಯಾಂಗ್ಳೋರ್ ಎಂಬ ಹೆಸರಿರುವ ಕೋಣವನ್ನು ಬೇಡ ಎಂದು ಕಳುಹಿಸಿ ʼಅರ್ಥ ಆಯ್ತಾʼ ಎಂದು ಹೇಳುವ ಮೂಲಕ ಹೆಸರು ಬದಲಾವಣೆಯಾಗಲಿದೆ ಎಂಬ ಸುಳಿವು ನೀಡಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಬಹು ದಿನಗಳ ಕನಸು ನನಸಾಗಲಿದೆ.