ರಿಯಾದ್: ಅವಳಿ ಗೋಲು ಗಳಿಸಿದ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅಲ್ ನಸ್ರ್ ತಂಡ ಫೈನಲ್ ನಲ್ಲಿ ಅಲ್ ಹಿಲಾಲ್ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿ ಅರಬ್ ಕ್ಲಬ್ ಚಾಂಪಿಯನ್ಸ್ ಕಪ್ ಜಯಿಸಲು ನೆರವಾಗಿದ್ದಾರೆ.
ಕಳೆದ ವರ್ಷ ಸೌದಿ ಪ್ರೊ ಲೀಗ್ ನಲ್ಲಿ ಅಲ್-ನಸ್ರ್ ರನ್ ಅಪ್ ಗೆ ತೃಪ್ತಿಪಟ್ಟ ಕಾರಣ ರೊನಾಲ್ಡೊ ಟ್ರೋಫಿ ಜಯಿಸುವಲ್ಲಿ ವಿಫಲರಾಗಿದ್ದರು. ಆದರೆ 38ರ ವಯಸ್ಸಿನ ರೊನಾಲ್ಡೊ ಶನಿವಾರ ಕಿಂಗ್ ಫಹದ್ ಇಂಟರ್ನ್ಯಾಶನಲ್ ಸ್ಟೇಡಿಯಮ್ ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹೆಚ್ಚುವರಿ ಸಮಯದಲ್ಲಿ(98ನೇ ನಿಮಿಷ)ಗೋಲು ಗಳಿಸಿ ಅಲ್ ನಸ್ರ್ ತಂಡ ಮೊತ್ತ ಮೊದಲ ಬಾರಿ ಅರಬ್ ಕ್ಲಬ್ ಚಾಂಪಿಯ್ಸನ್ ಕ್ಲಬ್ ಜಯಿಸಲು ಪ್ರಮುಖ ಕೊಡುಗೆ ನೀಡಿದರು.
ಅಲ್ ಹಿಲಾಲ್ ತಂಡ ಆರಂಭದಿಂದಲೂ ಪ್ರಾಬಲ್ಯ ಮೆರೆದಿದ್ದು, ಸ್ಟಾರ್ ಆಟಗಾರರನ್ನು ಒಳಗೊಂಡ ಅಲ್ ನಸ್ರ್ ತಂಡ ಮೊದಲಾರ್ಧದಲ್ಲಿ ಗೋಲು ಗಳಿಸುವ ಹಲವು ಅವಕಾಶಗಳನ್ನು ಪಡೆದಿತ್ತು. ಆದರೆ ಅಲ್ ಹಿಲಾಲ್ ಗೋಲ್ ಕೀಪರ್ ಗೋಲು ನಿರಾಕರಿಸಿದರು. ಉಭಯ ತಂಡಗಳು ತೀವ್ರ ಪೈಪೋಟಿ ನಡೆಸಿದ ಕಾರಣ ಮೊದಲಾರ್ಧದ ಪಂದ್ಯ ಗೋಲುರಹಿತವಾಗಿ ಅಂತ್ಯವಾಯಿತು. 51ನೇ ನಿಮಿಷದಲ್ಲಿ ಹೆಡರ್ನ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಗೆ ತಲುಪಿಸಿದ ಬ್ರೆಝಿಲ್ ನ ಮೈಕಲ್ ಅಲ್ ಹಿಲಾಲ್ ತಂಡ 1-0 ಮುನ್ನಡೆ ಪಡೆಯಲು ನೆರವಾದರು.
ತನ್ನ ಖ್ಯಾತಿಗೆ ತಕ್ಕಂತೆ ಆಡಿದ ರೊನಾಲ್ಡೊ 74ನೇ ನಿಮಿಷದಲ್ಲಿ ಗೋಲು ಗಳಿಸಿ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು. ಐದು ಬಾರಿಯ ಬ್ಯಾಲನ್ ಡಿ ಓರ್ ಪ್ರಶಸ್ತಿ ವಿಜೇತ ರೊನಾಲ್ಡೊ ಟೂರ್ನಮೆಂಟ್ ನಲ್ಲಿ ಒಟ್ಟು 6 ಗೋಲುಗಳನ್ನು ಗಳಿಸಿ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದರು.
ನಿಗದಿತ ಸಮಯದಲ್ಲಿ ಸ್ಕೋರ್ 1-1ರಿಂದ ಸಮಬಲಗೊಂಡ ಕಾರಣ ಪಂದ್ಯವು ಹೆಚ್ಚುವರಿ ಸಮಯಕ್ಕೆ ವಿಸ್ತರಣೆಯಾಯಿತು. 98ನೇ ನಿಮಿಷದಲ್ಲಿ ಗೋಲು ಗಳಿಸಿದ ರೊನಾಲ್ಡೊ 2021ರ ಡಿಸೆಂಬರ್ ನಂತರ ಮೊದಲ ಬಾರಿ ಅಲ್ ನಸ್ರ್ ತಂಡ ಅಲ್ ಹಿಲಾಲ್ ತಂಡವನ್ನು ಸೋಲಿಸಲು ಅಮೂಲ್ಯ ಕೊಡುಗೆ ನೀಡಿದರು. ಹೆಚ್ಚುವರಿ ಸಮಯದ ಎರಡನೇ ಅವಧಿಯಲ್ಲಿ ಗಾಯಗೊಂಡಿರುವ ರೊನಾಲ್ಡೊ ಮೈದಾನವನ್ನು ತೊರೆದರು. ಸೌದಿ ಪ್ರೊ ಲೀಗ್ ಆರಂಭವಾಗಲು ಕೇವಲ ಎರಡು ದಿನಗಳಿರುವಾಗ ರೊನಾಲ್ಡೊ ಗಾಯಗೊಂಡಿರುವುದು ಅಲ್ ನಸ್ರ್ ತಂಡಕ್ಕೆ ಹಿನ್ನಡೆಯಾಗಿದೆ.
2022-23ರ ಋತುವಿನಲ್ಲಿ ಸೌದಿ ಪ್ರೊ ಲೀಗ್ ನಲ್ಲಿ ಅಲ್ ನಸ್ರ್ 2ನೇ ಸ್ಥಾನ ಪಡೆದಿದ್ದರೆ, ಅಲ್ ಹಿಲಾಲ್ ಮೂರನೇ ಸ್ಥಾನ ಪಡೆದಿತ್ತು.
ಅರಬ್ ಕ್ಲಬ್ ಚಾಂಪಿಯ್ಸನ್ ಕ್ಲಬ್ ಪಂದ್ಯಾವಳಿಯನ್ನು ಪ್ರದೇಶದ ಅಗ್ರ ಅರಬ್ ಕ್ಲಬ್ ಗಳು ಆಡುತ್ತವೆ. ಸೌದಿ ಅರೇಬಿಯಾ, ಖತರ್, ಯುನೈಟೆಡ್ ಅರಬ್ ಎಮಿರೇಟ್ಸ್, ಇರಾಕ್, ಮೊರಾಕ್ಕೊ, ಟುನೀಶಿಯಾ ಹಾಗೂ ಅಲ್ಜೀರಿಯಾದ ತಂಡಗಳು ಇದರಲ್ಲಿ ಒಳಗೊಂಡಿವೆ.