ನವದೆಹಲಿ: ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿನ ರೋಹಿತ್ ಶರ್ಮಾ ಅವರ ಸ್ಥಾನಮಾನ ಕುರಿತು ಸ್ವತಃ ಹಿಟ್‌ಮ್ಯಾನ್ ಮನಬಿಚ್ಚಿ ಮಾತನಾಡಿದ್ದಾರೆ.
ಈ ಬಾರಿಯ ಐಪಿಎಲ್ ಸೀಸನ್‌ಗೆ ಮುಂಬೈ ತಂಡ ನೂತನ ಸಾರಥಿಯನ್ನು ನೇಮಕ ಮಾಡಿತ್ತು. ರೋಹಿತ್ ಶರ್ಮಾ ಉಪಸ್ಥಿತಿಯಲ್ಲಿಯೂ ಕೂಡಾ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನಾಗಿ ಎಂಐ ನೇಮಿಸಿದ ಬೆನ್ನಲ್ಲೇ ರೋಹಿತ್ ಅವರ ಅಪಾರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.
ಇನ್ನು ರೋಹಿತ್ ಅವರಿಂದ ಯಾವುದೇ ಇನ್‌ಪುಟ್ ಪಡೆಯದೇ ಹಾರ್ದಿಕ್ ಅವರನ್ನು ನಾಯಕನನ್ನಾಗಿ ಮಾಡಿದ್ದಾರೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದರು. ಈ ಎಲ್ಲದರ ಬಗ್ಗೆ ಟೀಮ್ ಇಂಡಿಯಾ ಕಪ್ತಾನ್ ತಮ್ಮ ಮೌನ ಮುರಿದು ಮೊದಲ ಬಾರಿಗೆ ಮಾತನಾಡಿದ್ದಾರೆ.
ಈ ಐಪಿಎಲ್‌ನಲ್ಲಿ ಹಾರ್ದಿಕ್ ನಾಯಕತ್ವದಡಿಯಲ್ಲಿ ಆಡುತ್ತಿರುವ ಅನುಭವದ ಬಗ್ಗೆ ಕೇಳಿದ ಪ್ರಶ್ನೆಗೆ “ಬೇರೆ ಕ್ಯಾಪ್ಟನ್‌ಗಳ ಅಡಿಯಲ್ಲಿ ಆಡುವುದು ನನಗೆ ಹೊಸದೇನಲ್ಲ. ಇವೆಲ್ಲವೂ ಜೀವನದ ಒಂದು ಭಾಗ, ನಾವು ಅಂದುಕೊಂಡಂತೆ ಏನು ನಡೆಯುವುದಿಲ್ಲ” ಎಂದು ಮಾಜಿ ನಾಯಕ ರೋಹಿತ್ ಶರ್ಮಾ ಅವರು ವಿವರಿಸಿದ್ದಾರೆ.
ಈ ಮೊದಲು ನಾನು ನಾಯಕನಾಗಿರಲಿಲ್ಲ. ಆವಾಗ ಹಲವಾರು ನಾಯಕರ ಅಡಿಯಲ್ಲಿ ನಾನು ಆಟವಾಡಿದ್ದೇನೆ. ಇದು ನನಗೆ ಭಿನ್ನವೂ ಅಲ್ಲ, ಹೊಸದು ಅಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಈ ಎಲ್ಲದರ ನಡುವೆ ರೋಹಿತ್ ಶರ್ಮಾ ಅವರು ಹಾರ್ದಿಕ್ ಪಾಂಡ್ಯ ಅವರ ಮೇಲೆ ಯಾವುದೇ ಬೇಸರವನ್ನು ಸಹಾ ವ್ಯಕ್ತಪಡಿಸಿಲ್ಲ ಎಂಬುದು ಗಮನಾರ್ಹ ಸಂಗತಿ..
ಈ ಹಿಂದೆ ಟೀಂ ಇಂಡಿಯಾ ಪರವಾಗಿ ಆಡುವಾಗ ಎಂ.ಎಸ್ ಧೋನಿ, ವಿರೇಂದ್ರ ಸೆಹ್ವಾಗ್ ಹಾಗೂ ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಪ್ರತಿನಿಧಿಸಿದ್ದರು. ಇನ್ನು ಐಪಿಎಲ್‌ನಲ್ಲಿ ಆಡಂ ಗಿಲ್‌ಕ್ರಿಸ್ಟ್, ಹರಭಜನ್ ಸಿಂಗ್, ರಿಕ್ಕಿ ಪಾಂಟಿಂಗ್ ಅವರ ಗರಡಿಯಲ್ಲಿ ರೋಹಿತ್ ಆಟವಾಡಿದ್ದಾರೆ.





