Mysore
20
overcast clouds
Light
Dark

ಈ ಸಾಧನೆ ಮಾಡಿದ ನಂತರ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತೇನೆ: ಹಿಟ್‌ಮ್ಯಾನ್‌

ಟೀಂ ಇಂಡಿಯಾ ಕಪ್ತಾನ್‌ ರೊಹಿತ್‌ ಶರ್ಮಾ ಅವರು ತಮ್ಮ ಕ್ರಿಕೆಟ್‌ ನಿವೃತ್ತಿಯ ಬಗ್ಗೆ ಮೌನ ಮುರಿದಿದ್ದಾರೆ. 2024ರ ಟಿ20 ವಿಶ್ವಕಪ್‌ ನಂತರ ರೋಹಿತ್‌ ಶರ್ಮಾ ಅವರು ನಿವೃತ್ತಿ ಹೊಂದಲಿದ್ದಾರೆ ಎಂದು ಎಲ್ಲರೂ ಊಹಿಸಿದ್ದರು. ಈ ಬಗ್ಗೆ ಸ್ವತಃ ಹಿಟ್‌ಮ್ಯಾನ್‌ ರೋಹಿತ್‌ ಮಾತನಾಡಿದ್ದಾರೆ.

2007 ರಲ್ಲಿ ಎಂ.ಎಸ್‌ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದು ಬೀಗಿತ್ತು. ಆಗ ಆ ತಂಡದಲ್ಲಿ ಭಾಗವಾಗಿದ್ದ ರೋಹಿತ್‌ ಶರ್ಮಾ, 2023 ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ಇದೀಗ ಇವರ ನಿವೃತ್ತಿ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು ಖಾಸಗೀ ಸಂದರ್ಶನದಲ್ಲಿ ಮಾತನಾಡಿರುವ ಅವರು, ತಾವು ಆ ಸಾಧನೆ ಮಾಡಿದ ನಂತರ ನಿವೃತ್ತಿ ಹೊಂದುವುದಾಗಿ ಹೇಳಿದ್ದಾರೆ.

ತಮ್ಮ ನಿವೃತ್ತಿ ಬಗ್ಗೆ ಮಾತನಾಡುತ್ತಾ, ನನಗೆ ನಿಜವಾಗಿಯೂ ನಿವೃತ್ತಿಯ ಬಗ್ಗೆ ಚಿಂತನೆಗಳು ಬಂದಿಲ್ಲ ಹಾಗೆಯೇ ಎಲ್ಲಿಯವರೆಗೆ ಆಡುತ್ತೇನೆ ಎಂಬುದು ತಿಳಿದಿಲ್ಲ. ಈಗ ಉತ್ತಮ ಫಾರ್ಮ್‌ನಲ್ಲಿದ್ದು, ಮುಂದಿನ ಕೆಲವು ವರ್ಷಗಳು ಕ್ರಿಕೆಟ್‌ ಆಡುವುದನ್ನು ಮುಂದುವರೆಸುತ್ತೇನೆ ಮುಂದೆ ಏನಾಗತ್ತದೆ ಎಂಬುದು ನನಗೆ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಅವರು ಮುಂಬರುವ ಟಿ20 ವಿಶ್ವಕಪ್‌ ಹಾಗೂ 2027 ರಲ್ಲಿ ನಡೆಯುವ ಏಕದಿನ ವಿಶ್ವಕಪ್‌ ಗೆಲ್ಲುವ ಬಯಕೆಯನ್ನು ಹೊಂದಿದ್ದಾರೆ. ನಾನು ವಿಶ್ವಕಪ್‌ ಅನ್ನು ನೋಡುತ್ತಾ ಬೆಳೆದಿದ್ದು ಅದನ್ನು ಗೆಲ್ಲಲ್ಲು ಪ್ರಯತ್ನಿಸುತ್ತೇವೆ ಎಂದಿರುವ ಅವರು. ತಮ್ಮ ಕ್ರಿಕೆಟ್‌ ವೃತ್ತಿಯಲ್ಲಿ 2025ರಲ್ಲಿ ಲಾರ್ಡ್ಸ್‌ ನಲ್ಲಿ ನಡೆಯಲಿರುವ ಟೆಸ್ಟ್‌ ಚಾಂಪಿಯನ್‌ಶಿಪ್‌ ಗೆಲ್ಲಲು ಬಯಸುತ್ತಿರುವುದಾಗಿ ಅವರು ಮುಕ್ತ ಕಂಠದಿಂದ ವಿವರಿಸಿದ್ದಾರೆ. ಇದರೊಂದಿಗೆ ಅವರು 2027ರ ವಿಶ್ವಕಪ್‌ ವರೆಗೂ ತಮ್ಮ ಆಟ ಆಡಲಿದ್ದು, ಸದ್ಯಕ್ಕೆ ನಿವೃತ್ತಿ ಹೊಂದುತ್ತಾರೆ ಎಂಬ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ.

ಇದರೊಂದಿಗೆ ವಿಶ್ವಕಪ್‌ ಸೋಲಿನ ಬಗ್ಗೆಯೂ ಮಾತನಾಡಿರುವ ರೋಹಿತ್‌, ಹೋಮ್‌ ಗ್ರೌಂಡ್‌ನಲ್ಲಿಯೇ ವಿಶ್ವಕಪ್‌ ಸೋತಿದ್ದು ದುರಂತ. ನಾವು ವಿಶ್ವಕಪ್‌ ನೋಡಿಯೇ ಬೆಳೆದವರು. ಆ ಟೂರ್ನಿಯುದ್ದಕ್ಕೂ ಉತ್ತಮವಾಗಿಯೇ ಆಡಿದ್ದೆವು. ನಮಗೂ ವಿಶ್ವಕಪ್‌ನಲ್ಲಿ ಕೆಟ್ಟ ದಿನ ಬರಲಿದೆ ಎಂದು ಭಾವಿಸಿದ್ದೇವು. ಅದರೇ ನಮ್ಮ ದುರಾದೃಷ್ಟಕ್ಕೆ ಅದು ಫೈನಲ್‌ ದಿನವೇ ಆಗಿತ್ತು. ನಮ್ಮ ಆಟ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಆಸ್ಟ್ರೇಲಿಯಾ ನಮಗಿಂತ ಉತ್ತಮವಾದ ಆಟ ಪ್ರದರ್ಶಿಸಿ ವಿಶ್ವಕಪ್‌ ಗೆದ್ದರು ಎಂದು ಬೇಸರ ವ್ಯಕ್ತಪಡಿಸಿದರು.