Mysore
20
overcast clouds
Light
Dark

ವಿಶ್ವಕಪ್‌ ವಿಜಯೋತ್ಸವ: ತೆರೆದ ವಾಹನದಲ್ಲಿ 9 ಕಿಮೀ ಮೆರವಣಿಗೆ ಹೊರಟ ರೋಹಿತ್‌ ಅಂಡ್‌ ಟೀಂ

ಮುಂಬೈ: ಅಮೇರಿಕಾ ಹಾಗೂ ವೆಸ್ಟ್‌ ಇಂಡೀಸ್‌ ಸಹಭಾಗಿತ್ವದಲ್ಲಿ ನಡೆದ 9ನೇ ಆವೃತ್ತಿಯ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ ಗೆದ್ದು ಟ್ರೋಫಿ ಮುಡಿಗೇರಿಸಿಕೊಂಡಿದೆ.

ಫೈನಲ್‌ ಪಂದ್ಯದಲ್ಲಿ ಚೋಕರ್ಸ್‌ ಸೌಥ್‌ ಆಫ್ರಿಕಾ ತಂಡವನ್ನು ಮಣಿಸಿ 7ರನ್‌ ಗಳ ಅಂತರದಿಂದ ವಿಶ್ವಕಪ್‌ ಫೈನಲ್‌ನಲ್ಲಿ ಗೆಲುವು ದಾಖಲಿಸಿತು. ಆ ಮೂಲಕ 17 ವರ್ಷಗಳ ಬಳಿಕ ಟೀಂ ಇಂಡಿಯಾ ಟ್ರೋಫಿ ಎತ್ತಿ ಹಿಡಿದಿತ್ತು.

ಇನ್ನು ವೆಸ್ಟ್‌ ಇಂಡೀಸ್‌ನಿಂದ ಭಾರತಕ್ಕೆ ಬಂದಿಳಿದ ಟೀಂ ಇಂಡಿಯಾ ಆಟಗಾರರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ನವದೆಹಲಿಗೆ ಆಗಮಿಸಿದ ಟೀಂ ಇಂಡಿಯಾ ಆಟಗಾರರನ್ನು ಮೋದಿ ಸ್ವಾಗತಿಸಿ ಅಭಿನಂದಿಸಿದರು. ಬಳಿಕ ಅಲ್ಲಿಂದ ನಿರ್ಗಮಿಸಿದ ಟೀಂ ಇಂಡಿಯಾ ಆಟಗಾರರು ಸೀದಾ ಮುಂಬೈಗೆ ಬಂದಿಳಿದರು.

ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್‌ ಎರಡರಲ್ಲಿ ಬಂದಿಳಿದರು. ಅಲ್ಲಿಂದ ಮುಂಬೈ ಕಡಲತೀರ ಮರೀನಾ ಡ್ರೈವ್‌ನಿಂದ ಸುಮಾರು 9 ಕಿಮೀ ವರೆಗೆ ತೆರೆದ ವಾಹನದಲ್ಲಿ ಟೀಂ ಇಂಡಿಯಾ ಆಟಗಾರರು ವಿಶ್ವಕಪ್‌ ಟ್ರೋಫಿ ಪ್ರದರ್ಶಿಸಿ ಮೆರವಣಿಗೆ ಹೊರಟರು.

ತಮ್ಮ ತಂಡದ ಗೆಲುವಿಗಾಗಿ ಪ್ರಾರ್ಥಿಸಿದ ಕೋಟ್ಯಾಂತರ ಮಂದಿ ಅಭಿಮಾನಿಗಳ ಕಡೆ ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ ಅವರು ಕೈ ಬೀಸಿದರು.

ಇನ್ನು ಕಡಲತೀರದ ಕಿನಾರೆಯಲ್ಲಿ ಜಮಾಯಿಸಿದ್ದ ಲಕ್ಷಾಂತರ ಮಂದಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಂಡರು. ಇನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದ ಕಡೆ ನಡೆದ ಮೆರವಣಿಗೆ ಬಳಿಕ ಸ್ಟೇಡಿಯಂನಲ್ಲಿ ನೆರೆದಿರುವ ಸಾವಿರಾರು ಅಭಿಮಾನಿಗಳನ್ನು ಟೀಂ ಇಂಡಿಯಾ ಆಟಗಾರರು ಭೇಟಿಯಾಗಲಿದ್ದಾರೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡಕ್ಕೆ ಬಿಸಿಸಿಐ ವತಿಯಿಂದ ಗೌರವ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಆಟಗಾರರನ್ನು ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಕಾರ್ಯದರ್ಶಿ ಜೈ ಶಾ ಅಭಿನಂದಿಸಲಿದ್ದಾರೆ. ಬಳಿಕ ಈ ಹಿಂದೆಯೇ ಪ್ರಕಟಿಸಿರುವಂತೆ 125 ಕೋಟಿ ಬಹುಮಾನದ ಹಣ ತಂಡದ ಪಾಲಾಗಲಿದೆ.