ಬೆಂಗಳೂರು: ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ನಿರ್ಣಾಯಕ ಹಂತದಲ್ಲಿರುವ ಕರ್ನಾಟಕ ತಂಡದ ಪರ ರಾಷ್ಟ್ರೀಯ ತಂಡದ ಪರ ಆಡುವ ಪ್ರಮುಖ ಬ್ಯಾಟರ್ ಕೆ.ಎಲ್.ರಾಹುಲ್ ಕಣಕ್ಕಿಳಿದಿದ್ದಾರೆ.
ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಹರಿಯಾಣ ತಂಡದ ವಿರುದ್ಧ ಕರ್ನಾಟಕ ತಂಡ ಆಡಲಿದ್ದು, ಉಭಯ ತಂಡಗಳಿಗೆ ಈ ಪಂದ್ಯ ಗೆಲ್ಲುವುದು ಮುಖ್ಯವಾಗಿದೆ.
ʼಸಿʼ ಗುಂಪಿನಲ್ಲಿರುವ ಎರಡು ತಂಡಗಳು, ಆಡಿರುವ ಆರು ಪಂದ್ಯಗಳಲ್ಲಿ ಒಂದರಲ್ಲೂ ಸೋತಿಲ್ಲ. ಹರಿಯಾಣ ತಲಾ ಮೂರು ಜಯ ಹಾಗೂ ಡ್ರಾನೊಂದಿಗೆ 26 ಪಾಯಿಂಟ್ ಹೊಂದಿದ್ದೂ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದೆ. ಆದರೆ, ಕರ್ನಾಟಕ ತಂಡ 19 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಕರ್ನಾಟಕ ಮುಂದಿನ ಸುತ್ತು ಪ್ರವೇಶಿಸಬೇಕೆಂದರೆ ಹರಿಯಾಣ ವಿರುದ್ಧದ ಪಂದ್ಯ ಮಹತ್ವದ್ದಾಗಿದೆ. ಇಲ್ಲಿ ಗೆದ್ದರೂ, ಕೇರಳ-ಬಿಹಾರ ಪಂದ್ಯದ ಫಲಿತಾಂಶವೂ ಮುಖ್ಯವಾಗಲಿದೆ.
ಪ್ರಮುಖ ಟೂರ್ನಿಗಳ ವೈಫಲ್ಯದ ನಂತರ ದೇಶಿ ಕ್ರಿಕೆಟ್‌ನಲ್ಲಿ ಭಾರತ ತಂಡದ ಆಟಗಾರರು ಆಡಬೇಕು ಎಂದು ಬಿಸಿಸಿಐ ಇತ್ತೀಚಿಗೆ ನಿಯಮಗಳನ್ನು ಜಾರಿ ಮಾಡಿತ್ತು. ಇದರನ್ವಯ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಶುಭಮನ್ ಗಿಲ್, ಶ್ರೇಯಸ್ ಐಯ್ಯರ್ ರಣಜಿ ಟ್ರೋಫಿ ಟೂರ್ನಿಯಲ್ಲಿ ಅಡಿದ್ದರು.
ಈಗ ವಿರಾಟ್ ಕೊಹ್ಲಿ ದೆಹಲಿ ತಂಡದ ಪರವಾಗಿ ಹಾಗೂ ಕೆ.ಎಲ್ ರಾಹುಲ್ ಕರ್ನಾಟಕ ತಂಡದ ಪರ ಕಣಕ್ಕಿಳಿದಿದ್ದಾರೆ.