ಕೊಲ್ಕತ್ತಾ: ಜೋಸ್ ಬಟ್ಲರ್ ಅವರ ಶತಕದಾಟದ ಫಲವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ 2 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಅ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.
ಇಲ್ಲಿನ ಈಡೆನ್ ಗಾರ್ಡನ್ ಮೈದಾನದಲ್ಲಿ ನಡೆದ ಐಪಿಎಲ್ ಸೀಸನ್ 17ರ ಲೀಗ್ ಪಂದ್ಯದಲ್ಲಿ ಕೆಕೆಆರ್ ಮತ್ತು ಆರ್‌ಆರ್ ತಂಡಗಳು ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 223ರನ್ ಗಳಿಸಿ 224ರನ್‌ಗಳ ಗುರಿ ನೀಡಿತು. ಈ ಬೃಹತ್ ಮೊತ್ತ ಬೆನ್ನತ್ತಿದ ರಾಜಸ್ಥಾನ್ ಬಟ್ಲರ್ ಶತಕದಾಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8ವಿಕೆಟ್ ಕಳೆದುಕೊಂಡು 224 ರನ್ ಬಾರಿಸಿ ಗೆದ್ದು ಬೀಗಿತು.
ಕೆಕೆಆರ್ ಇನ್ನಿಂಗ್ಸ್: ತಮ್ಮ ತವರಿನಂಗಳದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಆಲ್‌ರೌಂಡರ್ ನರೈನ್ ರಾಜಸ್ಥಾನ್ ಬೌಲರ್‌ಗಳನ್ನು ಕಾಡಿದರು. 56 ಎಸೆತ ಎದುರಿಸಿದ ಅವರು 13ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 109 ಗಳಿಸಿ ಐಪಿಎಲ್‌ನಲ್ಲಿ ತಮ್ಮ ಮೊದಲ ಶತಕ ಪೂರೈಸಿದರು. ಇವರಿಗೆ ಸಾಥ್ ನೀಡಿದ ರಘುವಂಶಿ 18 ಎಸೆತಗಳಲ್ಲಿ 30 ರನ್ ಬಾರಿಸಿ ಔಟಾದರು. ಉಳಿದಂತೆ ಸಾಲ್ಟ್ 10, ನಾಯಕ ಅಯ್ಯರ್ 11, ಎಸೆಲ್ 13, ವೆಂಕಟೇಶ್ ಅಯ್ಯರ್ 8 ರನ್ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ರಿಂಕು ಸಿಂಗ್ ಕೇವಲ 9 ಎಸೆತಗಳಲ್ಲಿ 20ರನ್ ಚಚ್ಚಿ ತಂಡದ ಮೊತ್ತ ಇನ್ನೂರರ ಗಡಿ ದಾಟಲು ಸಹಕರಿಸಿದರು.
ರಾಜಸ್ಥಾನ್ ಪರ ಆವೇಶ್ ಖಾನ್ ಹಾಗೂ ಕಲ್ದೀಪ್ ಸೇನ್ ತಲಾ ಎರಡು ವಿಕೆಟ್ ಪಡೆದರೇ, ಬೋಲ್ಟ್ ಹಾಗೂ ಚಾಹಲ್ ತಲಾ ಒಂದೊಂದು ವಿಕಟ್ ಪಡೆದು ಮಿಂಚಿದರು.
ರಾಜಸ್ಥಾನ್ ಇನ್ನಿಂಗ್ಸ್: ಈ ಬೃಹತ್ ಮೊತ್ತ ಚೇಸ್ ಮಾಡಿದ ಆರ್‌ಆರ್‌ಗೆ ಆರಂಭಿಕ ಆಘಾತ ಎದುರಾಯಿತು. ಜೈಸ್ವಾಲ್ ಮತ್ತೊಮ್ಮೆ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಅವರು 19ನರ್ ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೊಮ್ಮೆ ರಾಜಸ್ಥಾನ್ ತಂಡದಲ್ಲಿ ಮಧ್ಯಮ ಕ್ರಮಾಂಕ ಕೈಕೊಟ್ಟಿತು. ನಾಯಕ ಸಂಜು 12ರನ್, ರಿಯಾನ್ ಪರಾಗ್ 34ರನ್, ಧೃವ್ ಜುರೆಲ್ 2, ಅಶ್ವಿನ್ 8 ಮತ್ತು ಹೆಟ್ಮಯರ್ ಶೂನ್ಯಕ್ಕೆ ಔಟಾಗುವ ಮೂಲಕ ಆರ್‌ಆರ್‌ಗೆ ಕಂಟಕವಾದರು.
ಆದರೆ ಆರಂಭದಿಂದಲೇ ನಿಧಾನಗತಿಯಲ್ಲಿ ಆಟ ಮುಂದುವರೆಸಿದ ಆರಂಭಿಕ ದಾಂಡಿಗ ಜೋಸ್ ಬಟ್ಲರ್ ಶತಕ ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಹಾಗೂ ಈ ಟೂರ್ನಿಯಲ್ಲಿ ಎರಡನೇ ಶತಕ ದಾಖಲಿಸಿದರು. ಅಜೇಯರಾಗಿ ಉಳಿದ ಬಟ್ಲರ್ ತಾವಾಡಿದ 60 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 9 ಬೌಂಡರಿ ಸಹಿತ 107ರನ್ ಬಾರಿಸಿದರು ತಂಡವನ್ನು ಗೆಲುವಿನ ದಡ ಸೇರಿಸಿದರು. ಪೋವಲ್ 26 ರನ್ ಬಾರಿಸಿ ಇವರಿಗೆ ಸಾಥ್ ನೀಡಿದರು.
ಕೊಲ್ಕತ್ತಾ ಪರ ಸುನೀಲ್ ನರೈನ್ ಹಾಗೂ ಹರ್ಷಿತ್ ರಾಣಾ ತಲಾ 2 ವಿಕೆಟ್ ಪಡೆದರು.
ಪಂದ್ಯ ಶ್ರೇಷ್ಠ: ಜೋಸ್ ಬಟ್ಲರ್