ಚೆನ್ನೈ: ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್ ಸೀಸನ್‌ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ 36 ರನ್‌ಗಳ ಅಂತರದ ಗೆಲುವು ದಾಖಲಿಸುವ ಮೂಲಕ ಕ್ವಾಲಿಫೈಯರ್-2 ಪಂದ್ಯ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದೇ ಮೇ.26ರಂದು ಚೆನ್ನೈ ನ ಇದೇ ಚಿದಂಬರಂ ಕ್ರಿಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಕೊಲ್ಕತ್ತಾ ನೈಟ್‌ರೈಡರ್ಸ್ ತಂಡವನ್ನು ಎದುರಿಸಲಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿ 176 ರನ್‌ಗಳ ಗುರಿ ನೀಡಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 139 ರನ್ ಗಳಿಸಲಷ್ಟೇ ಶಕ್ತವಾಯಿತು.
ಸನ್‌ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಪರವಾಗಿ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರು. ಟ್ರಾವಿಸ್ ಹೆಡ್ 34(28) ರನ್ ಗಳಿಸಿದರೇ, ಅಭಿಷೇಕ್ ಶರ್ಮಾ 12(5) ರನ್ ಗಳಿಸಿ ಔಟಾದರು.
ತಂಡಕ್ಕೆ ಮತ್ತೊಮ್ಮೆ ಮಧ್ಯಮ ಕ್ರಮಾಂಕ ಕೈಕೊಟ್ಟಿತು. ರಾಹುಲ್ ತ್ರಿಪಾಟಿ 37(15) ರನ್, ಮಾರ್ಕ್ರಂ 1(2)ರನ್ ಗಳಿಸಿ ಕುಸಿತ ಕಂಡಿತು. ಈ ವೇಳೆ ಸುಭದ್ರವಾಗಿ ನಿಂತು ಇನ್ನಿಂಗ್ಸ್ ಕಟ್ಟಿದ ವಿಕೇಟ್ ಕೀಪರ್ ಕ್ಲಾಸೆನ್ ತಂಡಕ್ಕೆ ಚೇತರಿಕೆಯ ಆಟವಾಡಿದರು. ಇವರು 34 ಎಸೆತ ಎದರಿಸಿ 4 ಸಿಕ್ಸರ್ ಸಹಿತ 50 ರನ್ ಬಾರಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಶ್ರಮಿಸಿದರು. ಉಳಿದಂತೆ ನಿತೀಶ್ ರೆಡ್ಡಿ 5(10)ರನ್, ಶಹಬಾಜ್ ಅಹ್ಮದ್ 18(18)ರನ್, ಅಬ್ದುಲ್ ಸಮದ್ ಡಕ್‌ಔಟ್, ಉನಾದ್ಕಟ್ 5(2) ಮತ್ತು ನಾಯಕ ಕಮಿನ್ಸ್ ಔಟಾಗದೇ 5(5) ರನ್ ಬಾರಿಸಿದರು.
ರಾಜಸ್ಥಾನ್ ಪರ ಟ್ರೆಂಟ್ ಬೌಲ್ಟ್ ಹಾಗೂ ಅವೇಶ್ ಖಾನ್ ತಲಾ ಮೂರು ವಿಕೆಟ್ ಪಡೆದರು. ಸಂದೀಪ್ ಶರ್ಮಾ 2 ವಿಕೆಟ್ ಕಬಳಿಸಿ ಮಿಂಚಿದರು.
ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್: ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ರಾಜಸ್ಥಾನ್‌ಗೆ ಪರವಾಗಿ ಆರಂಭಿಕರಾಗು ಟಾಮ್ ಕೊಹ್ಲರ್ ಕ್ಯಾಡ್ಮೋರ್ ಮತ್ತು ಜೈಸ್ವಾಲ್ ಕಣಕ್ಕಿಳಿದರು. ಟಾಮ್ ಕೊಹ್ಲರ್ ಕ್ಯಾಡ್ಮೋರ್ 10(16)ರನ್ ಗಳಿಸಿ ಔಟಾದರೇ, ಜೈಸ್ವಾಲ್ 42(21) ಉತ್ತಮ ಇನ್ನಿಂಗ್ಸ್ ಕಟ್ಟಿಕೊಟ್ಟು ಔಟಾದರು. ಬಳಿಕ ತಂಡ ದಿಢೀರ್ ಕುಸಿತ ಕಂಡಿತು. ಬಂದ ಯಾರಿಂದಲೂ ನಿರೀಕ್ಷಿತ ಆಟ ಕಂಡು ಬರಲಿಲ್ಲ.
ನಾಯಕ ಸಂಜು ಸ್ಯಾಮ್ಸನ್ 10(11)ರನ್, ರಿಯಾನ್ ಪರಾಗ್ 6(10)ರನ್, ರವಿಚಂದ್ರನ್ ಅಶ್ವಿನ್ ಡಕ್‌ಔಟ್ ಆದರೆ, ಹೆಟ್ಮಾಯರ್ 4(10)ರನ್, ರೋಮನ್ ಪೋವೆಲ್ 4(10) ಗಳಿಸಿ ಔಟಾದರು.
ಕೊನೆಯಲ್ಲಿ ಅಬ್ಬರಿಸಿದ ಧೃವ್ ಜುರೆಲ್ ಔಟಾಗದೇ 35 ಎಸೆತಗಳಲ್ಲಿ 7ಬೌಂಡರಿ 2 ಸಿಕ್ಸರ್ ಸಹಿತ 56 ರನ್ ಗಳಿಸಿಯೂ ತಂಡವನ್ನು ಗೆಲ್ಲಿಸಲು ಆಗಲಿಲ್ಲ. ಬೋಲ್ಟ್ ಯಾವುದೇ ರನ್ ಬಾರಿಸದೇ ನಾಟ್‌ಔಟ್ ಆಗಿ ಉಳಿದರು. ಬ್ಯಾಟಿಂಗ್ ವೈಫಲ್ಯದಿಂದಾಗಿ ಈ ಪಂದ್ಯ ಸೋತ ಆರ್‌ಆರ್ ಟೂರ್ನಿಯಲ್ಲಿ ಅಭಿಯಾನ ಮುಗಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಹೈದರಾಬಾದ್ ಪರ ಷಹಬಾಜ್ ಅಹ್ಮದ್ 3, ಅಭಿಷೇಕ್ ಶರ್ಮಾ 2, ನಾಯಕ ಕಮಿನ್ಸ್ ಹಾಗೂ ನಟರಾಜನ್ ತಲಾ ಒಂದೊಂದು ವಿಕೆಟ್ ಪಡೆದರು.