ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಂ ಇಂಡಿಯಾ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸಕ್ಕೆ ಕರೆದು ಅಭಿನಂದನೆ ಸಲ್ಲಿಸಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಟಿ20 ವಿಶ್ವಕಪ್ ಚಾಂಪಿಯನ್ ಜಯಿಸಿದ ಬಳಿಕ ಇಂದು ಭಾರತಕ್ಕೆ ಬಂದಿಳಿದಿದ್ದು, ಟೀಂ ಇಂಡಿಯಾಗೆ ತವರಿನಲ್ಲೇ ಭರ್ಜರಿ ಸ್ವಾಗತ ಸಿಕ್ಕಿದೆ. ಭಾರತಕ್ಕೆ ಬಂದಿಳಿದ ಟೀಂ ಇಂಡಿಯಾ, ಖಾಸಗಿ ಹೋಟೆಲ್‌ಗೆ ತೆರಳಿದ ಬಳಿಕ ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ಭೇಟಿ ನೀಡಿತು. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಟೀಂ ಇಂಡಿಯಾ ಆಟಗಾರರನ್ನು ಮೋದಿ ಅಭಿನಂದಿಸಿದರು. ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿದ ಬಳಿಕ ಭಾರತ ಕ್ರಿಕೆಟ್ ತಂಡವು ಮುಂಬೈಗೆ ಪ್ರಯಾಣ ಬೆಳೆಸಿತು.
ಜೂನ್.29ರಂದು ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎದುರು 7 ರನ್‌ಗಳ ರೋಚಕ ಜಯ ಸಾಧಿಸಿ 17 ವರ್ಷಗಳ ಬಳಿಕ ಎರಡನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿಯನ್ನು ಜಯಿಸುವಲ್ಲಿ ಯಶಸ್ವಿಯಾಗಿತ್ತು.
ಇದಾದ ಬಳಿಕ ಜುಲೈ.1ರಂದೇ ಟೀಂ ಇಂಡಿಯಾ ತವರಿಗೆ ವಾಪಸ್ಸಾಗಬೇಕಿತ್ತು. ಆದರೆ ಬಾರ್ಬಡೋಸ್‌ನಲ್ಲಿ ಬೆರಿಲ್ ಚಂಡಮಾರುತ ಅಪ್ಪಳಿಸಿದ್ದರಿಂದ, ಪ್ರತಿಕೂಲ ವಾತಾವರಣ ಉಂಟಾಗಿ ಭಾರತ ತಂಡ ತವರಿಗೆ ವಾಪಸ್ಸಾಗುವುದು ತಡವಾಯಿತು. ಇದೀಗ ಇಂದು ಮುಂಜಾನೆ 6 ಗಂಟೆಗೆ ರಾಷ್ಟ್ರ ರಾಜಧಾನಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತ ಕ್ರಿಕೆಟ್ ತಂಡ ಬಂದಿಳಿಯಿತು. ಭಾರತ ತಂಡವು ತವರಿಗೆ ಬಂದಿಳಿಯುತ್ತಿದ್ದಂತೆಯೇ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿತು.