ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮನು ಭಾಕರ್‌ಗೆ ಪ್ರಧಾನಿ ನರೇಂದ್ರ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
2024ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕಾಗಿ ಮೊದಲ ಪದಕ ತಂದುಕೊಟ್ಟ ಮಹಿಳಾ ಶೂಟರ್ ಮನು ಭಾಕರ್‌ಗೆ ಪ್ರಧಾನಿ ಮೋದಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದು, ಇದು ಐತಿಹಾಸಿಕ ಗೆಲುವು. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಅಭಿನಂದನೆಗಳು. ಇದು ನಂಬಲು ಅಸಾಧ್ಯವಾದ ಸಾಧನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಶ್ಲಾಘಿಸಿದ್ದಾರೆ.
ಅಷ್ಟೇ ಅಲ್ಲದೇ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ, ಕೇಂದ್ರ ಸಚಿವರಾದ ಅಮಿತ್ ಶಾ, ಕಿರಣ್ ರಿಜಿಜು, ಟೀ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಸೇರಿದಂತೆ ಅನೇಕರು ಮನು ಭಾಕರ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಕಂಚಿಕ ಪದಕ ಜಯಿಸಿದ ಬಳಿಕ ಖುಷಿ ಹಂಚಿಕೊಂಡ ಮನು ಭಾಕರ್ ಅವರು, ನಾನು ಭಗವದ್ಗೀತೆ ಓದಿದ್ದು, ಪದಕ ಗೆಲ್ಲಲು ನೆರವಾಗಿದೆ. ನಾನು ಸಾಕಷ್ಟು ಬಾರಿ ಭಗವದ್ಗೀತೆ ಓದಿದ್ದೇನೆ. ಅದರಲ್ಲಿ ಭಗವಂತ ಶ್ರೀಕೃಷ್ಣನು ನಿನ್ನ ಕೆಲಸವನ್ನು ನೀನು ಮಾಡು. ಅದರಿಂದ ಬರುವ ಫಲಿತಾಂಶದ ಬಗ್ಗೆ ಆಲೋಚಿಸಬೇಡ ಎನ್ನುವ ಮಾತು ನನಗೆ ಸ್ಪೂರ್ತಿಯಾಯಿತು ಎಂದು ಭಾಕರ್ ಸಂತಸ ವ್ಯಕ್ತಪಡಿಸಿದ್ದಾರೆ.