ಐಪಿಎಲ್ ಆಡಲ್ಲ ಎಂದು 2 ಐಸಿಸಿ ಟ್ರೋಫಿ ಬಾಚಿಕೊಂಡ ಪ್ಯಾಟ್ ಕಮಿನ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸಬೇಕೆಂದು ಬಹುತೇಕ ಕ್ರಿಕೆಟ್ ಆಟಗಾರರೂ ಸಹ ಇಚ್ಛಿಸುತ್ತಾರೆ. ಈ ಕಲರ್ ಫುಲ್ ಟೂರ್ನಿಯಲ್ಲಿ ಭಾಗವಹಿಸಿದ್ರೆ ಹೆಸರಿನ ಜತೆ ಲಕ್ಷ್ಮಿಯೂ ಸಹ ಒಲಿತಾಳೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯವೇ.
ಹೀಗಾಗಿಯೇ ಇಂಡಿಯನ್ ಪ್ರೀಮಿಯರ್ ಲೀಗ್ ಎಂದರೆ ಭಾರತದ ಆಟಗಾರರು ಮಾತ್ರವಲ್ಲದೆ ವಿದೇಶಿ ಆಟಗಾರರೂ ಸಹ ಪ್ರಾಶಸ್ತ್ಯ ನೀಡಿ ಭಾರತಕ್ಕೆ ಓಡೋಡಿ ಬರುತ್ತಾರೆ. ಆದರೆ ಕೆಲವೊಂದಷ್ಟು ಆಟಗಾರರು ಮಾತ್ರ ಐಪಿಎಲ್ ಆಡಲಾರೆ ನನಗೆ ನನ್ನ ದೇಶದ ಪರ ಆಡುವುದು ಮುಖ್ಯ ಅಂತ ನೇರವಾಗಿ ಹೇಳಿದ ಉದಾಹರಣೆಗಳೂ ಸಹ ಇವೆ.
ಅಂತಹ ಆಟಗಾರರಲ್ಲಿ ಪ್ಯಾಟ್ ಕಮಿನ್ಸ್ ಸಹ ಓರ್ವರು. ಹೌದು, ಪ್ಯಾಟ್ ಕಮಿನ್ಸ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿದಿರಲಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್‌ನ ಭಾಗವಹಿಸುವಿಕೆಯ ಒತ್ತಡ ಹೆಚ್ಚಿರುವ ಕಾರಣ ಈ ನಿರ್ಧಾರ ಕೈಗೊಂಡಿದ್ದೇನೆ ಎಂಬ ಕಾರಣವನ್ನು ನೀಡಿದ್ದರು. ಅಂದು ಇಂತಹ ನಿರ್ಧಾರ ಪ್ರಕಟಿಸಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಪ್ಯಾಟ್ ಕಮಿನ್ಸ್ ಇಂದು ವಿಶ್ವ ಚಾಂಪಿಯನ್ ಆಗಿದ್ದಾರೆ.
ಹೌದು, ನಿನ್ನೆ ( ನವೆಂಬರ್ 19 ) ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದ ಆಸ್ಟ್ರೇಲಿಯಾ ತಂಡವನ್ನು ಇದೇ ಪ್ಯಾಟ್ ಕಮಿನ್ಸ್ ನಾಯಕನಾಗಿ ಮುನ್ನಡೆಸಿದ್ದಾರೆ. ಆರಂಭದಲ್ಲಿ ಲೀಗ್ ಪಂದ್ಯಗಳನ್ನು ಸೋತು ಮುಗ್ಗರಿಸಿದ್ದ ಕಾಂಗರೂಗಳು ಇಂದು ಟ್ರೋಫಿ ಎತ್ತಿ ಹಿಡಿಯಲು ಕಮಿನ್ಸ್ ಚಾಣಕ್ಷತೆ ಸಹ ಕಾರಣ.
ಹೀಗೆ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದ ಬಳಿಕ ಪ್ಯಾಟ್ ಕಮಿನ್ಸ್ ಐಪಿಎಲ್ ಆಡುವುದಿಲ್ಲ ಎಂದು ನೀಡಿದ್ದ ಹೇಳಿಕೆ ವೈರಲ್ ಆಗಿದೆ. ಪ್ಯಾಟ್ ಕಮಿನ್ಸ್ ಐಪಿಎಲ್ ನಲ್ಲಿ ಭಾಗವಹಿಸುವುದನ್ನು ತಿರಸ್ಕರಿಸಿದ ಬಳಿಕ ನಾಯಕನಾಗಿ 2023ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಟ್ರೋಫಿ ಗೆದ್ದರು, ನಾಯಕನಾಗಿ ಪ್ರತಿಷ್ಠಿತ ಆಶಸ್ ಟ್ರೋಫಿ ಉಳಿಸಿಕೊಂಡರು ಹಾಗೂ ಈಗ ವಿಶ್ವಕಪ್ ಗೆದ್ದಿದ್ದಾರೆ, ಹೀಗಾಗಿ ಕ್ರಿಕೆಟಿಗರು ಫ್ರಾಂಚೈಸಿ ಕ್ರಿಕೆಟ್ ಲೀಗ್ ಗಳನ್ನು ಆಡುವುದನ್ನು ಕಡಿಮೆ ಮಾಡಿ ತಮ್ಮ ಸಮಯವನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ನತ್ತ ನೀಡಬೇಕು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.