IPL-2024ರ 17 ನೇ ಆವೃತ್ತಿಗೆ ಎಲ್ಲಾ ತಂಡಗಳು ತಯಾರಿ ಆರಂಭಿಸಿದ್ದು, ಈ ಬೆನ್ನಲ್ಲೇ ಎಸ್‌ಆರ್‌ಎಚ್ (ಸನ್ ರೈಸರ್ಸ್ ಹೈದರಾಬಾದ್) ತಂಡ ಮುಂಬರುವ ಆವೃತ್ತಿಗೆ ತಮ್ಮ ತಂಡದ ನೂತನ ನಾಯಕನನ್ನು ಘೋಷಿಸಿದೆ.
ಮುಂಬೈಗೆ ಪಾಂಡ್ಯ ನಾಯಕನೆಂದು ಘೋಷಿಸಿ ಅಚ್ಚರಿ ಮೂಡಿಸಿದ ಕೆಲವು ದಿನಗಳ ನಂತರ ಹೈದರಾಬಾದ್ ಸಹಾ ನಾಯಕನನ್ನು ಬದಲಾಯಿಸಿದ್ದು, ಮಾರ್ಕ್ರಂಗೆ ಕೋಕ್ ನೀಡಿದೆ.
IPL-2024ರ ಆರಂಭಕ್ಕೂ ಮುನ್ನಾ ನಡೆದ ಹರಾಜಿನಲ್ಲಿ ಅತ್ಯಧಿಕ ಬೆಲೆಗೆ ಎಸ್‌ಆರ್‌ಎಚ್ ತಂಡಕ್ಕೆ ಸೇಲ್ ಆದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ನೂತನ ನಾಯಕನಾಗಿ ನೇಮಕ ಮಾಡಲಾಗಿದ್ದು, ಪ್ಯಾಟ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಹಿಂದಿನ ಅವಧಿಯಲ್ಲಿ ದ. ಆಫ್ರಿಕಾದ ಐಡೆನ್ ಮಾರ್ಕ್ರಂ ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದರು.
ಆಸೀಸ್ ಪರ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಪ್ಯಾಟ್ ಕಮಿನ್ಸ್ ಆಸೀಸ್ ಪರ ಡಬ್ಲ್ಯೂಟಿಸಿ, ವಿಶ್ವಕಪ್ ಗೆದ್ದ ನಾಯಕ ಎಂಬ ಹೆಗ್ಗಳಿಕೆ ಇವರು ಪಾತ್ರರಾಗಿದ್ದರು. ಇದೀಗ ಅವರು ಹೈದರಾಬಾದ್ ತಂಡವನ್ನು ಮುನ್ನಡೆಸಲಿದ್ದಾರೆ.
ಬೌಲಿಂಗ್ ಆಲ್‌ರೌಂಡರ್ ಆಗಿರುವ ಪ್ಯಾಟ್, ಈ ಹಿಂದೆ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಿದ್ದರು. ಈ ಆಟಗಾರನನ್ನು ಹೈದರಾಬಾದ್ ಈ ಬಾರಿಯ ಹರಾಜಿನಲ್ಲಿ ಬರೋಬ್ಬರಿ 20.50 ಕೋಟಿ ರೂಗೆ ಖರೀದಿಸಿದೆ. ಆ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಕಾಕತಾಳಿಯ ಎಂಬಂತೆ ಹೈದರಾಬಾದ್ ಪರ ಆಸೀಸ್ ಆಟಗಾರರು ನಾಯಕರಾದಾಗಲೆಲ್ಲಾ ತಂಡ ಟ್ರೋಫಿ ಗೆದ್ದಿದೆ. 2008 ರಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡಕ್ಕೆ ಆಸೀಸ್ ಕೀಪರ್ ಆಡಂ ಗಿಲ್‌ಕ್ರಿಸ್ಟ್ ನಾಯಕರಾಗಿದ್ದರು. ಐಪಿಎಲ್‌ನ ಚೊಚ್ಚಲ ಟೂರ್ನಿಯನ್ನು ಹೈದರಾಬಾದ್ ಗೆದ್ದು ಬೀಗಿತ್ತು.
ನಂತರ 2016 ರಲ್ಲಿ ವಾರ್ನರ್ ನಾಯಕನಾದ ಮೇಲೆ, ಫೈನಲ್‌ನಲ್ಲಿ ಆರ್‌ಸಿಬಿಯನ್ನು ಸೋಲಿಸಿ ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿತು. ಇದೀಗ 2024ರ ಆವೃತ್ತಿಗೆ ಪ್ಯಾಟ್ ನಾಯಕರಾಗಿದ್ದು, ಎಸ್‌ಆರ್‌ಎಚ್ ಟ್ರೋಫಿ ಗೆಲ್ಲಲಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಲೆಕ್ಕಾಚಾರ ಹಾಕಿದ್ದಾರೆ.
ಯಶಸ್ವಿ ನಾಯಕರಲ್ಲಿ ಒಬ್ಬರಾದ ಪ್ಯಾಟ್ ಸದ್ಯ ಹೈದರಾಬಾದ್ ನಾಯಕರಾಗಿದ್ದು, ಅವರ ನಾಯಕತ್ವದಿಂದ ಎಸ್‌ಆರ್‌ಎಚ್‌ಗೆ ವರದಾನವಾಗಲಿದೆಯಾ? ಇಲ್ಲವಾ? ಎಂಬುದನ್ನು ಕಾದುನೋಡಬೇಕಿದೆ.