ಹೈದರಾಬಾದ್ : ಶುಕ್ರವಾರ ಪಾಕಿಸ್ತಾನ ತಂಡವು ನ್ಯೂಝಿಲೆಂಡ್ ತಂಡದೆದುರಿನ ತನ್ನ ಪ್ರಥಮ ಪೂರ್ವಾಭ್ಯಾಸ ಪಂದ್ಯದಲ್ಲಿ ಪರಾಭವಗೊಂಡಿತು. ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಪಾಕಿಸ್ತಾನ ತಂಡವು ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ಗೆ 345 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಪಾಕಿಸ್ತಾನ ತಂಡದ ಪರ ಮುಹಮ್ಮದ್ ರಿಝ್ವಾನ್ 103 ಹಾಗೂ ನಾಯಕ ಬಾಬರ್ ಅಝಂ 80 ರನ್ ಗಳನ್ನು ಗಳಿಸಿದರು. ನಂತರ ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ರಚಿನ್ ರವೀಂದ್ರ ಅವರ ಸ್ಫೋಟಕ 97 ರನ್ ಗಳ ನೆರವಿನಿಂದ ಕೇವಲ 43.4 ಓವರ್ ಗಳಲ್ಲಿ ಗೆಲುವಿನ ಗುರಿ ಮುಟ್ಟಿತು.
ಪರಾಭವಗೊಂಡ ತಂಡಕ್ಕೆ ಸೇರಿದ್ದರೂ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮುಹಮ್ಮದ್ ರಿಝ್ವಾನ್ ಕೇವಲ 93 ಬಾಲ್ ಗಳಲ್ಲಿ ಶತಕ ಬಾರಿಸಿ ಗಮನ ಸೆಳೆದರು. ಪಂದ್ಯದ ಮೊದಲ ಇನಿಂಗ್ಸ್ ಮುಗಿದ ನಂತರ ರಿಝ್ವಾನ್, ತಮ್ಮ ತಂಡಕ್ಕೆ ಆತ್ಮೀಯ ಸ್ವಾಗತ ನೀಡಿದ ಹೈದರಾಬಾದ್ ನ ಕ್ರಿಕೆಟ್ ಪ್ರೇಮಿಗಳಿಗೆ ಕೃತಜ್ಞತೆ ಅರ್ಪಿಸಿದರು.
“ಶತಕ ಎಂದಿಗೂ ಶತಕವೇ. ನನಗೆ ಈ ಬಗ್ಗೆ ಹೆಮ್ಮೆ ಮತ್ತು ಸಂತಸವಿದೆ. ಪಾಕಿಸ್ತಾನಕ್ಕಾಗಿ ಶತಕ ಗಳಿಸುವುದು ಎಂದಿಗೂ ವಿಶೇಷವೆ. ಭಾರತೀಯ ಕ್ರಿಕೆಟ್ ಪ್ರೇಮಿಗಳು ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನದ ಜನರು ನಮಗೆ ನೀಡುವಷ್ಟು ಪ್ರೀತಿಯನ್ನೇ ನೀಡಿದರು. ನಮಗೆ ಭಾರತದಲ್ಲಿ ಅದ್ಭುತ ಸ್ವಾಗತ ದೊರೆಯಿತು” ಎಂದು ರಿಝ್ವಾನ್ ಶ್ಲಾಘಿಸಿದರು.