Mysore
21
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಏಷ್ಯಾಕಪ್‌ ವಿಚಾರದಲ್ಲಿ ಮೊಂಡು ಹಠ ಹಿಡಿದ ಪಾಕ್: ವಿಶ್ವಕಪ್ ಆಡುವುದು ಅನುಮಾನ

ಲಾಹೋರ್: ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ಬಿಸಿಸಿಐ ಮತ್ತು ಐಸಿಸಿ ತಯಾರಿಯಲ್ಲಿ ತೊಡಗಿದೆ. ಆದರೆ ನೆರ ರಾಷ್ಟ್ರ ಪಾಕಿಸ್ತಾನವು ಮತ್ತೆ ತನ್ನ ಬುದ್ದಿ ತೋರಿಸಿದ್ದು, ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲು ತಗಾದೆ ತೆಗೆದಿದೆ.

ಐಸಿಸಿ ಈಗಾಗಲೇ ವಿಶ್ವಕಪ್ ಕೂಟದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನವು ಭಾರತದ ವಿರುದ್ಧ ಪಂದ್ಯವನ್ನು ಅಹಮದಾಬಾದ್ ನಲ್ಲಿ ಆಡಲಿದೆ. ಬೆಂಗಳೂರು, ಚೆನ್ನೈ ಸೇರಿ ಐದು ನಗರಗಳಲ್ಲಿ ತನ್ನ ಲೀಗ್ ಪಂದ್ಯಗಳನ್ನು ಆಡಲಿದೆ. ಆದರೆ ಇದೀಗ ಪಾಕಿಸ್ತಾನವು ಈ ಕೂಟದಲ್ಲಿ ಆಡುವುದೇ ಅನುಮಾನ ಎನ್ನಲಾಗಿದೆ

ಪಾಕಿಸ್ತಾನದ ಕ್ರೀಡಾ ಸಚಿವ ಎಹ್ಸಾನ್ ಮಜಾರಿ ಅವರು ಭಾರತೀಯ ಪತ್ರಿಕೆಯೊಂದಿಗೆ ಮಾತನಾಡುತ್ತಾ, ಏಷ್ಯಾಕಪ್ ಆಡಲು ಭಾರತವು ಗಡಿ ದಾಟಿ ಪಾಕ್ ಗೆ ಬರದಿದ್ದರೆ, ನಾವೂ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿದ್ದಾರೆ.

ರಕ್ಷಣಾ ಕಾರಣದಿಂದ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ಕಾರಣದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮಾಜಿ ಮುಖ್ಯಸ್ಥ ನಜಮ್ ಸೇಥಿ ಅವರು ಏಷ್ಯಾ ಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಡಲು ಒಪ್ಪಿಕೊಂಡಿದ್ದರು. ಈ ಮಾದರಿಯ ಅಡಿಯಲ್ಲಿ, ಆತಿಥ್ಯ ಹಕ್ಕು ಹೊಂದಿರುವ ಪಾಕಿಸ್ತಾನವು ಈಗ ಕೇವಲ 4 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ ಮತ್ತು ಶ್ರೀಲಂಕಾ ಏಷ್ಯಾ ಕಪ್‌ನ 9 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ಆದರೆ ಇದೀಗ ಕ್ರೀಡಾ ಸಚಿವ ಮಜಾರಿ ಅವರು ಹೈಬ್ರಿಡ್ ಮಾದರಿಯನ್ನು ಬಯಸುವುದಿಲ್ಲ ಎಂದು ಹೇಳುತ್ತಿದ್ದು, ಪಾಕಿಸ್ತಾನವು ಆತಿಥ್ಯ ಹಕ್ಕು ಹೊಂದಿದ್ದು, ದೇಶದಲ್ಲಿ ಎಲ್ಲಾ ಪಂದ್ಯಗಳನ್ನು ನಡೆಸುವ ಹಕ್ಕಿದೆ ಎಂದು ಹೇಳಿದರು.

ಒಂದು ವೇಳೆ ಭಾರತವು ಏಷ್ಯಾಕಪ್ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲು ಬಯಸಿದರೆ, ನಾವು ಕೂಡಾ ವಿಶ್ವಕಪ್ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲೇ ಆಡುತ್ತೇವೆ ಎಂದು ಎಹ್ಸಾನ್ ಮಜಾರಿ ಹೇಳಿದರು.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಏಕದಿನ ವಿಶ್ವಕಪ್‌ ನಲ್ಲಿ ಪಾಕಿಸ್ತಾನ ಭಾಗವಹಿಸುತ್ತದೆಯೇ ಎಂದು ನಿರ್ಣಯಿಸಲು ಸಚಿವರ ಸಮಿತಿಯನ್ನು ರಚಿಸಿದರು. ಸಮಿತಿಯ ನೇತೃತ್ವವನ್ನು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ವಹಿಸಲಿದ್ದಾರೆ.

ಭಾರತವು ‘ರಾಜಕೀಯಕ್ಕೆ ಕ್ರೀಡೆಯನ್ನು’ ತರುತ್ತಿದೆ ಎಂದು ಆರೋಪಿಸಿದ ಮಜಾರಿ, ಇತರ ಕ್ರೀಡಾ ಸಂಬಂಧಗಳು ಈಗಾಗಲೇ ಉತ್ತಮವಾಗಿ ನಡೆಯುತ್ತಿರುವಾಗ ಭಾರತ ಸರ್ಕಾರ ತಮ್ಮ ಪುರುಷರ ಕ್ರಿಕೆಟ್ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ಯಾವುದೇ ಸರಿಯಾದ ಕಾರಣವನ್ನು ಕಾಣುತ್ತಿಲ್ಲ ಎಂದು ಹೇಳಿದರು. ಪಾಕಿಸ್ತಾನದಲ್ಲಿ ಆಡುವಾಗ ಭಾರತ ಸರ್ಕಾರದ ‘ಭದ್ರತಾ ಕಾಳಜಿ’ಯನ್ನು ನಂಬಲು ನಿರಾಕರಿಸಿದ ಅವರು, ಇತ್ತೀಚೆಗೆ ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡರು ಮತ್ತು ಅವರಿಗೆ ಅಧ್ಯಕ್ಷೀಯ ಭದ್ರತೆಯನ್ನು ನೀಡಲಾಗಿದೆ ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ