Mysore
19
few clouds
Light
Dark

On This Day: ಅನಿಲ್‌ ಕುಂಬ್ಳೆ 10 ವಿಕೆಟ್‌ ಸಾಧನೆಗೆ 25 ವರ್ಷ

ಕ್ರಿಕೆಟ್‌ ಜಗತ್ತು ಕಂಡ ಲೆಜೆಂಡರಿ ಸ್ಪಿನ್‌ ಬೌಲರ್ ಅನಿಲ್‌ ಕುಂಬ್ಳೆ ಟೆಸ್ಟ್‌ ಕ್ರಿಕೆಟ್‌ನ ಇನ್ನಿಂಗ್ಸ್‌ವೊಂದರಲ್ಲಿ ಹತ್ತು ವಿಕೆಟ್‌ಗಳ ಗೊಂಚಲನ್ನು ಪಡೆದ ಸಾಧನೆಗೆ ಇಂದು ( ಫೆಬ್ರವರಿ 7 ) 25 ವರ್ಷಗಳು ಕಳೆದಿವೆ.

ದೆಹಲಿಯ ಫಿರೋಜ್‌ ಷಾ ಕೋಟ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅನಿಲ್‌ ಕುಂಬ್ಳೆ ಎರಡನೇ ಇನ್ನಿಂಗ್ಸ್‌ನಲ್ಲಿ ಹತ್ತು ವಿಕೆಟ್‌ ಕಬಳಿಸಿದ್ದರು. ಈ ಮೂಲಕ 1956ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ ಬೌಲರ್‌ ಜೇಮ್‌ ಲೇಕರ್‌ ಹತ್ತು ವಿಕೆಟ್‌ಗಳ ಗೊಂಚಲನ್ನು ಪಡೆದು ಮಾಡಿದ್ದ ದಾಖಲೆಯನ್ನು ಕನ್ನಡಿಗ ಅನಿಲ್ ಕುಂಬ್ಳೆ ಸರಿಗಟ್ಟಿದರು.

ಈ ಪಂದ್ಯದಲ್ಲಿ ಟೀಮ್‌ ಇಂಡಿಯಾ 212 ರನ್‌ಗಳ ಅಂತರದಲ್ಲಿ ಜಯಭೇರಿ ಬಾರಿಸಿತ್ತು. ಭಾರತ ನೀಡಿದ್ದ 420 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿದ್ದ ಪಾಕಿಸ್ತಾನ ಅನಿಲ್‌ ಕುಂಬ್ಳೆ ಬೌಲಿಂಗ್‌ ದಾಳಿಗೆ ಉತ್ತರವಿಲ್ಲದಾಗಿ ಕೇವಲ 207 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.

ಇನ್ನು ತಮ್ಮ ಈ 10 ವಿಕೆಟ್‌ಗಳ ಅವಿಸ್ಮರಣೀಯ ಸಾಧನೆಗೆ 25 ವರ್ಷಗಳು ಕಳೆದಿರುವುದರ ಕುರಿತು ಅನಿಲ್‌ ಕುಂಬ್ಳೆ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ವಿಶೇಷ ವಿಡಿಯೊವೊಂದನ್ನು ಹಂಚಿಕೊಂಡಿದ್ದು, “ಈ ಮ್ಯಾಜಿಕಲ್‌ ಡೇಗೆ 25 ವರ್ಷಗಳು. ಸಮಯ ನಿಜವಾಗಿಯೂ ಹಾರುತ್ತದೆ. ಆದರೆ ನೆನಪುಗಳು ಮಾತ್ರ ಯಾವಾಗಲೂ ಎದ್ದು ಕಾಣುತ್ತವೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಚಿರಋಣಿ” ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ ಈ ವಿಡಿಯೊದಲ್ಲಿ “ಪಾಕಿಸ್ತಾನ ಯಾವುದೇ ವಿಕೆಟ್‌ ನಷ್ಟವಿಲ್ಲದೇ ನೂರು ರನ್‌ ಗಡಿ ದಾಟಿ ಅತ್ಯುತ್ತಮ ಹಂತದಲ್ಲಿತ್ತು. ವಿಕೆಟ್‌ ಪಡೆಯಲೇಬೇಕಾದ ಕೆಲಸ ಬೌಲರ್‌ಗಳದ್ದಾಗಿತ್ತು” ಎಂದು ಹೇಳಿಕೊಂಡಿದ್ದಾರೆ.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ