ಪ್ಯಾರಿಸ್: ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನ ಪುರುಷರ ಹೈಜಂಪ್ ಟಿ-47 ವಿಭಾಗದಲ್ಲಿ ಭಾರತದ ಪಟು ನಿಶಾದ್ ಕುಮಾರ್ ಅವರು ಬೆಳ್ಳಿ ಜಯಿಸಿದ್ದಾರೆ.
ಕಳೆದ ಟೊಕಿಯೋ ಒಲಂಪಿಕ್ಸ್‌ನಲ್ಲಿ ಇದೇ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದ ನಿಶಾದ್ ಅವರು ಪ್ರಸಕ್ತ ಋತುವಿನಲ್ಲಿ 2.04 ಮೀ ಜಿಗಿಯುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಅಮೇರಿಕಾದ ರೊಡೆರಿಕ್ ಟೌನ್ಸೆಂಡ್ (2.12 ಮೀ.) ಚಿನ್ನ ಗೆದ್ದರೇ, ಜಾರ್ಜಿ ಮಾರ್ಗೀವ್ (2 ಮೀ.) ಕಂಚಿಗೆ ತೃಪ್ತಿ ಪಟ್ಟುಕೊಂಡರು.
ರಾಷ್ಟ್ರಪತಿ ಅಭಿನಂದನೆ: ಹೈಜಂಪ್‌ನಲ್ಲಿ ಬೆಳ್ಳಿ ಗೆದ್ದ ನಿಶಾದ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು “ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಹೈಜಂಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ನಿಶಾದ್ ಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಅವರ ಟೋಕಿಯೊ ಪ್ಯಾರಾಲಿಂಪಿಕ್ ಬೆಳ್ಳಿ ಪದಕದ ನಂತರ ಎತ್ತರದ ಜಿಗಿತ ಸ್ಪರ್ಧೆಯಲ್ಲಿ ಅವರ ಸತತ ಬೆಳ್ಳಿ ಪದಕವಾಗಿದೆ. ಅವರ ಸ್ಥಿರತೆ ಮತ್ತು ಶ್ರೇಷ್ಠತೆಯನ್ನು ನಮ್ಮ ದೇಶದ ಕ್ರೀಡಾಪಟುಗಳು ಅನುಕರಿಸಬಹುದು. ಅವರು ನಿರಂತರ ಯಶಸ್ಸು ಮತ್ತು ವೈಭವವನ್ನು ಹೊಂದಬೇಕೆಂದು ನಾನು ಬಯಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.





