ಬಾಂಗ್ಲಾದೇಶ (ಢಾಕಾ) : ಗ್ಲೆನ್ ಪಿಲಿಪ್ ಅವರ ಆಲ್‌ರೌಂಡರ್ ಆಟದ ಪರಿಣಾಮ ನ್ಯೂಜಿಲೆಂಡ್ ತಂಡ, ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ಬಾಂಗ್ಲಾದೇಶ ವಿರುದ್ಧ ೪ ವಿಕೆಟ್‌ಗಳ ಜಯ ದಾಖಲಿಸಿದೆ.
ಇಲ್ಲಿನ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಗೆಲ್ಲುವ ಮೂಲಕ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ೧-೧ ಸಮಬಲದಿಂದ ಗೆದ್ದುಕೊಂಡಿದೆ.
ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ಪರವಾಗಿ ಮುಷ್ಫಿಕರ್ ರಹೀಮ್ ೩೫, ಹೊಸೇನ್ ೩೧, ಮೆಹದಿ ಹಸನ್ ೨೦ ರನ್ ಗಳಿಸಿದರು. ಬಾಂಗ್ಲಾ ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ ೬೬.೨ ಓವರ್‌ಗಳಲ್ಲಿ ೧೦ ವಿಕೆಟ್ ನಷ್ಟಕ್ಕೆ ೧೭೨ ರನ್ ಕಲೆಹಾಕಿದರು. ನ್ಯೂಜಿಲೆಂಡ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಗ್ಲೆನ್ ಪಿಲಿಪ್ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ ೩ ವಿಕೆಟ್ ಪಡೆದರು.
೧೭೨ ರನ್ ಬೆನ್ನತ್ತಿದ ನ್ಯೂಜಿಲೆಂಡ್‌ಗೆ ಆರಂಭಿಕ ಆಘಾತ ಎದುರಾಯಿತು. ತಂಡ ೪೬ ರನ್ ಗಳಿಸುವಷ್ಟರಲ್ಲೇ ಪ್ರಮುಖ ೫ ವಿಕೆಟ್ ಕಳೆದುಕೊಂಡಿತು. ಇತ್ತ ಏಕಾಂಗಿ ಹೋರಾಟ ನಡೆಸಿದ ಗ್ಲೆನ್ ಪಿಲಿಪ್ ೭೨ ಎಸೆತಗಳಲ್ಲಿ ೯ ಬೌಂರಿ ಮತ್ತು ೪ ಸಿಕ್ಸರ್ ಮೂಲಕ ೮೭ ರನ್ ಕಲೆಹಾಕಿದರು. ಅಂತಿಮವಾಗಿ ಕೀವಿಸ್ ಮೊದಲ ಇನ್ನಿಂಗ್ಸ್‌ನಲ್ಲಿ ೩೭.೧ ಓವರ್‌ಗಳಲ್ಲಿ ೧೦ ವಿಕೆಟ್ ಕಳೆದುಕೊಂಡು ೧೮೦ ರನ್ ದಾಖಲಿಸಿತು. ತನ್ನ ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ ೮ ರನ್ ಮುನ್ನಡೆ ಕಾಯ್ದುಕೊಂಡು ಎದುರಾಳಿಯನ್ನು ಆಹ್ವಾನಿಸಿತು.
ಬಾಂಗ್ಲಾ ಪರ ಅಮೋಘ ದಾಳಿ ನಡೆಸಿದ ಮೆಹದಿ ಹಸನ್ ಮತ್ತು ತೈಜುಲ್ ಇಸ್ಲಾಮ್ ತಲಾ ೩ ವಿಕೆಟ್ ಪಡೆದರು. ಶೋರಿಫುಲ್ ಇಸ್ಲಾಮ್ ಮತ್ತು ನಯೀಮ್ ತಲಾ ೨ ವಿಕೆಟ್ ಪಡೆದು ಮಿಂಚಿದರು.
ಇದರ ಬೆನ್ನಲ್ಲೇ ೮ ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ಕೇವಲ ೧೪೪ಕ್ಕೆ ಆಲ್‌ಔಟ್ ಆಯಿತು. ಬಾಂಗ್ಲಾ ಪರ ಝಕಿರ್ ಹಸನ್ ೫೯, ನಾಯಕ ಸಾಂಟೋ ೧೫ ಮತ್ತು ಬೌಲರ್ ತೈಜುಲ್ ಇಸ್ಲಾಮ್ ೧೪ ರನ್ ಗಳಿಸಿದ್ದೇ ಹೆಚ್ಚು.
ಕರಾರುವಕ್ಕಾಗ ದಾಳಿ ಮಾಡಿದ ಅಜಜ್ ಪಟೇಲ್ ೬ ವಿಕೆಟ್‌ಗಳ ಗೊಂಚಲು ಪಡೆದರು. ಸ್ಯಾಂಟ್ನರ್ ೩ ವಿಕೆಟ್ ಪಡೆದರೇ ಸೌಥಿ ೧ ವಿಕೆಟ್ ಪಡೆದರು.
ಸಾಧಾರಣ ಗುರಿ ಬೆನ್ನತ್ತಿದ ಕೀವಿಸ್ ಪಡೆ ೬ ವಿಕೆಟ್ ಕಳೆದುಕೊಂಡು ೧೩೯ ರನ್ ಗಳಿಸಿ ೪ ವಿಕೆಟ್‌ಗಳ ಜಯ ದಾಖಲಿಸಿತು. ಕೀವಿಸ್ ಪರ ಗ್ಲೆನ್ ಪಿಲಿಪ್ ೪೦, ಸ್ಯಾಂಟ್ನರ್ ೩೫, ಲಾಥಮ್ ೨೬ ರನ್ ಬಾರಿಸಿ ತಂಡವನ್ನು ಗೆಲಿವಿನತ್ತ ಕೊಂಡ್ಯೋಯ್ದರು. ಆ ಮೂಲಕ ಎರಡು ಟೆಸ್ಟ್ ಸರಣಿಯನ್ನು ಇತ್ತಂಡಗಳು ಸಮಬಲ ಕಾಯ್ದುಕೊಂಡವು.
ಬಾಂಗ್ಲಾ ಪರ ಮೆಹದಿ ಹಸನ್ ೩, ತೈಜುಲ್ ಇಸ್ಲಾಮ್ ೨ ಮತ್ತು ಸೋರಿಫುಲ್ ಇಸ್ಲಾಮ್ ೧ ವಿಕೆಟ್ ಪಡೆದರು.
ಪಂದ್ಯ ಶ್ರೇಷ್ಠ : ಗ್ಲೆನ್ ಪಿಲಿಪ್
ಸರಣಿ ಶ್ರೇಷ್ಠ : ತೈಜುಲ್ ಇಸ್ಲಾಮ್