Mysore
20
overcast clouds
Light
Dark

ಸಾಂಪ್ರದಾಯಿಕ ಛಾಯಾಚಿತ್ರಕ್ಕಾಗಿ ಪಾಕ್ ಅಥ್ಲೀಟ್‌ಗೆ ಆಹ್ವಾನಿಸಿ ಎಲ್ಲರ ಮನ ಗೆದ್ದ ನೀರಜ್ ಚೋಪ್ರಾ

ಬುಡಾಪೆಸ್ಟ್ : ಭಾರತದ ‘ಗೋಲ್ಡನ್ ಬಾಯ್’ ನೀರಜ್ ಚೋಪ್ರಾ ಅವರು ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಸ್ಪರ್ದೆಯೊಂದರಲ್ಲಿ ಅಗ್ರ ಸ್ಥಾನವನ್ನು ಪಡೆದ ತಮ್ಮ ದೇಶದ ಮೊದಲ ಅತ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನೀರಜ್ ಅವರು ರವಿವಾರ ತಡರಾತ್ರಿ ಪುರುಷರ ಜಾವೆಲಿನ್ ಥ್ರೋ ಫೈನಲ್ ನಲ್ಲಿ 88.17 ಮೀಟರ್ ಗಳ ದೂರವನ್ನು ತಲುಪಿ ಚಿನ್ನವನ್ನು ಜಯಿಸಿ ಈ ಸಾಧನೆ ಮಾಡಿದರು.

ಅವರೊಂದಿಗೆ ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನದ ಅರ್ಷದ್ ನದೀಮ್ 87.82 ಮೀಟರ್ ದೂರ ಕ್ರಮಿಸಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಫೈನಲ್ ನಂತರ, ಇಬ್ಬರು ಕ್ರೀಡಾಪಟುಗಳು ಮೈದಾನದಲ್ಲಿ ಎಲ್ಲರ ಗಮನ ಸೆಳೆಯುವ ಕ್ಷಣಕ್ಕೆ ಸಾಕ್ಷಿಯಾದರು. ಈ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಹೃದಯವನ್ನು ಗೆದ್ದಿತು.

ನೀರಜ್ ಮತ್ತು ನದೀಮ್ ಬಹಳ ಸಮಯದಿಂದ ಮೈದಾನದಲ್ಲಿ ಪರಸ್ಪರ ಹೋರಾಡುತ್ತಿದ್ದಾರೆ. ಅವರ ನಡುವಿನ ಬಾಂಧವ್ಯವು ಟ್ರ್ಯಾಕ್ ನ ಮೀರಿ ನಿಂತಿದೆ. ಹಾಗೂ ಇಬ್ಬರು ಪ್ರಮುಖ ಅತ್ಲೀಟ್ಗಳು ಅನೇಕ ಸಂದರ್ಭಗಳಲ್ಲಿ ಪರಸ್ಪರ ಬಹುಮಾನ ಸ್ವೀಕಾರದ ವೇದಿಕೆಯಲ್ಲಿ ಪದಕ ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ.

ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಪಾಕಿಸ್ತಾನದ ನದೀಮ್ ಮತ್ತೊಮ್ಮೆ 90 ಮೀಟರ್ ಮಾರ್ಕ್ ಅನ್ನು ದಾಟಲು ಬಯಸಿದ್ದರು ಆದರೆ ಅವರು ಆ ನಿಟ್ಟಿನಲ್ಲಿ ವಿಫಲರಾದರು. ಬುಡಾಪೆಸ್ಟ್ ನಲ್ಲಿ ಪುರುಷರ ಜಾವೆಲಿನ್ ಥ್ರೋ ಫೈನಲ್ ನ ಮುಕ್ತಾಯದ ನಂತರ, ನೀರಜ್ ಮೈದಾನದಲ್ಲಿ ಸಾಂಪ್ರದಾಯಿಕ ಛಾಯಾಚಿತ್ರಕ್ಕಾಗಿ ನದೀಮ್ ಅವರನ್ನು ಆಹ್ವಾನಿಸಿ ಎಲ್ಲರ ಮನ ಗೆದ್ದರು.

ನದೀಮ್ ತಕ್ಷಣವೇ ನೀರಜ್ ಕಡೆಗೆ ಧಾವಿಸಿದರು, ಅವರ ಪಕ್ಕದಲ್ಲಿಯೇ ನಿಂತರು, 86.67 ಮೀಟರ್ ಎಸೆದು ಕಂಚಿನ ಪದಕ ಪಡೆದ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಕೂಡ ಫೋಟೊಕ್ಕೆ ಪೋಸ್ಟ್ ನೀಡಿದರು.

ಈವೆಂಟ್ನಲ್ಲಿ ನೀರಜ್ ಮತ್ತು ನದೀಮ್ ಇಬ್ಬರೂ ತಮ್ಮ ಸಾಧನೆಗಳಿಗಾಗಿ ಪರಸ್ಪರ ಅಭಿನಂದಿಸಿದ ಕ್ಷಣದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ