ಗಯಾನಾ (ವೆಸ್ಟ್ ಇಂಡೀಸ್): “ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ರಣತಂತ್ರ ಚೆನ್ನಾಗಿತ್ತು. ಕೆಲ ತಪ್ಪುಗಳನ್ನು ಮಾಡಿದರೂ, ಉತ್ತಮ ಪ್ರದರ್ಶನವನ್ನೇ ನೀಡಿದೆ. ಆದರೂ ಸರಿಯಾದ ರಣತಂತ್ರ ಅನುಸರಿಸಿದ್ದೇ ಆದರೆ, ಭಾರತ ತಂಡ ಗೆದ್ದ ತಂಡ ಎನಿಸಿಕೊಳ್ಳುತ್ತಿತ್ತು. ಇಲ್ಲಿ ಟೀಮ್ ಇಂಡಿಯಾ ಆಕ್ರಮಣಕಾರಿ ಆಟವಾಡದೆ ಯಶಸ್ಸು ಕಾಣಲು ಸಾಧ್ಯವಿಲ್ಲ,” ಎಂದು ಭಾರತ ತಂಡದ ಮಾಜಿ ಬ್ಯಾಟರ್ ಅಭಿನವ್ ಮುಕುಂದ್ ಹೇಳಿದ್ದಾರೆ.
ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ, ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಸರಣಿ ಗೆದ್ದುದ್ದು, ಆತಿಥೇಯರ ವಿರುದ್ಧದ 5 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲೂ ಗೆಲ್ಲುವ ಹಾಟ್ ಫೇವರಿಟ್ ಆಗಿದೆ. ಆದರೆ, ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಸ್ಟೇಡಿಯಂನಲ್ಲಿ ಆಗಸ್ಟ್ 3ರಂದು ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆ ತೆತ್ತು 4 ರನ್‌ಗಳ ಅಂತರದಲ್ಲಿ ಸೋಲಿನ ಆಘಾತಕೊಳ್ಳಗಾಯಿತು.
“ಟೀಮ್ ಇಂಡಿಯಾ ಯುವ ಆಟಗಾರರಿಂದ ಕೂಡಿದೆ. ಹೀಗಾಗಿ ತಂಡದಿಂದ ಕೆಲ ತಪ್ಪುಗಳು ಆಗಿವೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಇಲ್ಲದೇ ಇರುವ ಕಾರಣ ತಂಡದ ಬ್ಯಾಟಿಂಗ್ ವಿಭಾಗ ಹೊಸಬರಿಂದ ಕೂಡಿದೆ. ಬೌಲಿಂಗ್ ವಿಭಾಗದಲ್ಲೂ ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಇಲ್ಲ. ಹೀಗಾಗಿ ಈ ಸೋಲಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ,” ಎಂದು ಜಿಯೊ ಸಿನಿಮಾ ಕ್ರಿಕೆಟ್ ಕಾರ್ಯಕ್ರಮದಲ್ಲಿ ಅಭಿನವ್ ಮುಕುಂದ್ ಹೇಳಿದ್ದಾರೆ.
“ಈ ಸೋಲಿನಲ್ಲಿ ತಂಡದ ನಿರ್ದಿಷ್ಟ ಸಮಸ್ಯೆಗಳನ್ನು ಹುಡುಕಲು ಸಾಧ್ಯವಿಲ್ಲ. ಏಕೆಂದರೆ ತೀರಾ ಕಡಿಮೆ ಅಂತರದಲ್ಲಿ ಸೋಲೆದುರಾಗಿದೆ. ಖಂಡಿತಾ ಭಾರತ ತಂಡ ಈ ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಲಿದೆ. ಅದಕ್ಕೆ ಬೇಕಾದ ಬಳಗವನ್ನು ಭಾರತ ತಂಡ ಹೊಂದಿದೆ. ಇನ್ನು ಯಶಸ್ಸು ದಕ್ಕಿಸಿಕೊಳ್ಳಬೇಕಾದರೆ ಟೀಮ್ ಇಂಡಿಯಾ ಭಯಮುಕ್ತ ಆಟವಾಡುವ ಅಗತ್ಯವಿದೆ ಅಷ್ಟೆ,” ಎಂದು ಹೇಳಿದ್ದಾರೆ.
“ಟ್ರಿನಿಡಾಡ್‌ನಲ್ಲಿ ಅಲ್ಲಿನ ಸ್ಥಿತಿಗತಿಗಳಿಗೆ ತಕ್ಕಂತರೆ ಭಾರತ ತಂಡ ತನ್ನ ಬ್ಯಾಟಿಂಗ್ ರಣತಂತ್ರ ರಚಿಸಿತ್ತು. ಅಲ್ಲಿ ಮಂದಗರಿಯ ಪಿಚ್ ಆದ್ದರಿಂದ ದೊಡ್ಡ ಹೊಡೆತಗಳನ್ನು ಆಡುವುದು ಸುಲಭದ್ದಾಗಿರಲಿಲ್ಲ. ಇನ್ನು ಎರಡನೇ ಟಿ20 ಪಂದ್ಯದಲ್ಲೂ ಸ್ಲೋ ಪಿಚ್ ಲಭ್ಯವಾಗಲಿದೆ ಎಂದೇ ನಿರೀಕ್ಷಿಸಬಹುದು. ಹೀಗಾಗಿ ಈ ಪಿಚ್‌ನಲ್ಲಿ ಎಡಗೈ ಬ್ಯಾಟರ್‌ಗಳಾದ ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಅಬ್ಬರಿಸಬಲ್ಲರು ಎಂದು ಎದುರು ನೋಡಬಹುದು. ಎರಡನೇ ಟಿ20ಯಲ್ಲಿ ಭಾರತೀಯ ಬ್ಯಾಟರ್‌ಗಳಿಂದ ಆಕ್ರಮಣಕಾರಿ ಆಟ ಎದುರು ನೋಡಬಹುದಾಗಿದೆ,” ಎಂದು ಅಭಿನವ್ ಹೇಳಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಅಗತ್ಯವಿಲ್ಲ: ಮುಕುಂದ್
ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ ಆಡಿಸಿದ್ದ ಬೌಲಿಂಗ್ ಬಳಗದಲ್ಲಿ ಯಾವುದೇ ಬದಲಾವಣೆ ತರುವ ಅಗತ್ಯವಿಲ್ಲ ಎಂದು ಅಭಿನವ್ ಮುಕುಂದ್ ಅಭಿಪ್ರಾಯ ಪಟ್ಟಿದ್ದಾರೆ.
“ಬೌಲಿಂಗ್ ವಿಭಾಗದಲ್ಲಿ ನಾವು ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹಾರ್ದಿಕ್ ಪಾಂಡ್ಯ 4 ಓವರ್ಗಳನ್ನು ಎಸೆಯುತ್ತಿರುವಾಗ ಹೆಚ್ಚುವರಿ ಮಧ್ಯಮ ವೇಗಿಯ ಅಗತ್ಯ ತಂಡಕ್ಕಿಲ್ಲ. ಮೊದಲ ಪಂದ್ಯದ ಡೆತ್ ಓವರ್‌ಗಳಲ್ಲಿ ಮುಖೇಶ್ ಕುಮಾರ್ ಭರ್ಜರಿ ದಾಳಿ ಸಂಘಟಿಸಿದ್ದರು. ಹೀಗಾಗಿ 2ನೇ ಪಂದ್ಯಕ್ಕೂ ಅವರು ಆಯ್ಕೆ ಆಗಲಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಚೇತರಿಸಿದ ಬಳಿಕ ಅರ್ಷದೀಪ್ ಸಿಂಗ್ ಈವರೆಗೆ ಶ್ರೇಷ್ಠ ಲಯ ಕಂಡುಕೊಂಡಂತೆ ಕಾಣಿಸುತ್ತಿಲ್ಲ. ಆದರೂ 2ನೇ ಪಂದ್ಯಕ್ಕೆ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಗಳಾಗುವುದು ಅನುಮಾನ,” ಎಂದು ಹೇಳಿದ್ದಾರೆ.