Mysore
13
clear sky

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಐಪಿಎಲ್ ಟೂರ್ನಿಯಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಎಂಎಸ್‌ಡಿ

ಚೆನ್ನೈ : ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಇತ್ತೀಚೆಗಷ್ಟೇ ತಮ್ಮ ನಾಯಕತ್ವದಲ್ಲಿ 200ನೇ ಪಂದ್ಯ ಪೂರೈಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್‌ ಧೋನಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸ್ಟಂಪ್ಸ್‌ ಹಿಂದೆ 200 ವಿಕೆಟ್‌ಗಳನ್ನು ಪೂರೈಸಿದ್ದಾರೆ.
41ರ ಪ್ರಾಯದ ಎಂಎಸ್‌ ಧೋನಿ ಈಗಲೂ ಯುವ ಆಟಗಾರರನ್ನು ನಾಚಿಸುವಂತಹ ಫಿಟ್‌ನೆಸ್‌ ಹಾಗೂ ಮೈದಾನದಲ್ಲಿ ಲವಲವಿಕೆಯಿಂದ ಕೂಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ದದ ಪಂದ್ಯದಲ್ಲಿ ಒಂದು ಕ್ಯಾಚ್, ಒಂದು ಸ್ಟಂಪ್‌ ಹಾಗೂ ಒಂದು ರನ್‌ ಔಟ್‌ ಮಾಡುವ ಮೂಲಕ ಐಪಿಎಲ್‌ ಟೂರ್ನಿಯಲ್ಲಿ ವಿಕೆಟ್‌ ಕೀಪರ್‌ ಆಗಿ 200 ಬ್ಯಾಟ್ಸ್‌ಮನ್‌ಗಳನ್ನು ಬಲಿ ಪಡೆದ ದಾಖಲೆ ಬರೆದಿದ್ದಾರೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಸ್ಟಾರ್‌ ಬ್ಯಾಟಿಂಗ್‌ ವಿಭಾಗವಿದ್ದರೂ ಸಿಎಸ್‌ಕೆ ಬೌಲರ್‌ಗಳ ಎದುರು ಹಿನ್ನಡೆ ಅನುಭವಿಸಿದರು. ನಾಯಕ ಏಡೆನ್ ಮಾರ್ಕ್ರಮ್ ಅವರನ್ನು ಮಹೇಶ್ ತೀಕ್ಷಣ ಅವರ ಬೌಲಿಂಗ್‌ನಲ್ಲಿ ಅದ್ಭುತ ಕ್ಯಾಚ್ ಪಡೆದು ಗಮನ ಸೆಳೆದ ಎಂಎಸ್‌ಡಿ, ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಮುನ್ನುಗ್ಗಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಸ್ಟಂಪ್ ಔಟ್ ಮಾಡುವಲ್ಲಿ ಯಶಸ್ವಿಯಾದರು.
ನಂತರ ವಾಷಿಂಗ್ಟನ್ ಸುಂದರ್ ಅವರನ್ನು ತಮ್ಮ ಚುರುಕಿನ ಫೀಲ್ಡಿಂಗ್‌ ಮೂಲಕ ರನೌಟ್ ಮಾಡಿದರು. ಆ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಟಂಪ್ಸ್‌ ಹಿಂದೆ 200 ವಿಕೆಟ್‌ ಪೂರ್ಣಗೊಳಿಸಿದ ಮೊದಲ ವಿಕೆಟ್ ಕೀಪರ್ ಎಂಬ ನೂತನ ದೊಡ್ಡ ದಾಖಲೆಯನ್ನು ಎಂಎಸ್‌ ಧೋನಿ ಬರೆದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅತಿ ಹೆಚ್ಚು ಟಿ20 ಕ್ಯಾಚ್ ಪಡೆದ ವಿಕೆಟ್ ಕೀಪರ್‌ಗಳ ಸಾಲಿನಲ್ಲೂ ಎಂಎಸ್‌ ಧೋನಿ (208) ಮುಂಚೂಣಿಯಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ (207), ಭಾರತದ ದಿನೇಶ್ ಕಾರ್ತಿಕ್ (205), ಪಾಕಿಸ್ತಾನದ ಕಮ್ರಾನ್ ಅಕ್ಮಲ್ (172) ಹಾಗೂ ವೆಸ್ಟ್ ಇಂಡೀಸ್‌ನ ದಿನೇಶ್ ರಾಮ್ದಿನ್ (150) ಟಾಪ್ 5 ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.
ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್, ರವೀಂದ್ರ ಜಡೇಜಾ (22 ಕ್ಕೆ 3) ಸ್ಪಿನ್ ಮೋಡಿಗೆ ನಲುಗಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 134 ರನ್‌ಗಳಿಗೆ ಸೀಮಿತವಾಯಿತು. ಈ ಗುರಿ ಹಿಂಬಾಲಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌, ಡೆವೋನ್ ಕಾನ್ವೇ ಅವರ ಆಕರ್ಷಕ ಅರ್ಧಶತಕದ (77 ರನ್) ನೆರವಿನಿಂದ 18.4 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 138 ಗಳಿಸಿ ಗೆಲುವಿನ ದಡ ಸೇರಿತು. ಈ ಗೆಲುವಿನ ಮೂಲಕ ಸಿಎಸ್‌ಕೆ 8 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆರಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!