ಧರ್ಮಶಾಲಾ : ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಬಾಂಗ್ಲಾದೇಶ ತಂಡ ಅಫ್ಘಾನಿಸ್ತಾನ ವಿರುದ್ಧ 6 ವಿಕೆಟ್‌ಗಳ ಗೆಲುವು ದಾಖಲಿಸಿದೆ.
ಶನಿವಾರ (ಅ. 7)ದಂದು ಧರ್ಮಶಾಲಾದ ಎಚ್‌ಪಿಸಿಎ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಗೆಲುವಿನ ಮೂಲಕ ಶುಭಾರಂಭ ಮಾಡಿದೆ.
ಅಫ್ಘಾನಿಸ್ತಾನ ತಂಡ ನೀಡಿದ 157 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 34.4 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಅಫ್ಘಾನಿಸ್ತಾನ ತಂಡದ ಪರ ಬ್ಯಾಟಿಂಗ್‌ನಲ್ಲಿ ರಹಮಾನುಲ್ಲಾ ಗುರ್ಬಾಜ್ 62 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 47 ರನ್ ಗಳಿಸಿದರೆ, ಇಬ್ರಾಹಿಂ ಝದ್ರಾನ್ 25 ಗಳಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 47 ರನ್‌ಗಳ ಜೊತೆಯಾಟವಾಡಿತು. ನಂತರ ಬಂದ ರಹಮತ್ ಶಾ 18 ರನ್, ನಾಯಕ ಹಶ್ಮತುಲ್ಲಾ ಶಾಹಿದಿ 18 ರನ್, ನಜಿಬುಲ್ಲಾ ಝದ್ರಾನ್ 5 ರನ್, ಮೊಹಮ್ಮದ್ ನಬಿ 6 ರನ್, ಅಜ್ಮತುಲ್ಲಾ ಒಮರ್ಜಾಯ್ 22 ರನ್, ರಶೀದ್ ಖಾನ್ 9 ರನ್ ಗಳಿಸಿ ತಂಡ 150ರ ಗಡಿ ತಲುಪಲು ಸಹಾಯ ಮಾಡಿದರು.
ಬೌಲಿಂಗ್‌ನಲ್ಲಿ ಬಾಂಗ್ಲಾದೇಶ ತಂಡದ ಪರ ನಾಯಕ ಶಕೀಬ್ ಅಲ್ ಹಸನ್ 8 ಓವರ್‌ಗಳಲ್ಲಿ 30 ರನ್ ನೀಡಿ 3 ವಿಕೆಟ್ ಪಡೆದರೆ, ಮೆಹದಿ ಹಸನ್ ಮಿರಾಜ್ 9 ಓವರ್‌ಗಳಲ್ಲಿ 25 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ಶೋರಿಫುಲ್ ಇಸ್ಲಾಂ 2 ವಿಕೆಟ್ ಕಬಳಿಸಿದರೆ, ತಸ್ಕಿನ್ ಅಹ್ಮದ್ ಮತ್ತು ಮುಸ್ತಫಿಜುರ್ ರಹಮಾನ್ ತಲಾ ಒಂದೊಂದು ವಿಕೆಟ್ ಪಡೆದರು.
157 ರನ್‌ಗಳ ಗುರಿ ಪಡೆದು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ತಂಡದ ತಂಝೀದ್ ಹಸನ್ 5 ರನ್ ಗಳಿಸಿ ಔಟಾದರು. ನಂತರ ಲಿಟ್ಟನ್ ದಾಸ್ ಕೂಡ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಜೊತೆಗೂಡಿದ ಮೆಹದಿ ಹಸನ್ ಮಿರಾಜ್ ಮತ್ತು ನಜ್ಮುಲ್ ಹೊಸೈನ್ ಶಾಂಟೋ 3ನೇ ವಿಕೆಟ್‌ಗೆ 97 ರನ್‌ಗಳ ಜೊತೆಯಾಟ ನಿರ್ಮಿಸಿ ಗೆಲುವಿನ ಸನಿಹ ಕೊಂಡೊಯ್ದರು.
ಮೆಹದಿ ಹಸನ್ ಮಿರಾಜ್ 73 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 57 ರನ್ ಬಾರಿಸಿ ಔಟಾದರೆ, ನಾಯಕ ಶಕೀಬ್ ಅಲ್ ಹಸನ್ 14 ರನ್ ಗಳಿಸಿ ನರ್ಗಮಿಸಿದರು.
ನಜ್ಮುಲ್ ಹೊಸೈನ್ ಶಾಂಟೋ 83 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಮೇತ ಅಜೇಯ 59 ರನ್ ಗಳಿಸಿದರೆ, ಮುಶ್ಫಿಕರ್ ರಹೀಂ ಔಟಾಗದೇ 2 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶಣ ನೀಡಿದ ಮೆಹದಿ ಹಸನ್ ಮಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.