ಪ್ಯಾರಿಸ್: ವಿಶ್ವ ವಿಖ್ಯಾತ ಕ್ರೀಡಾಕೂಟ ಒಲಂಪಿಕ್ಸ್ ಮುಕ್ತಾಯ ಸಮಾರಂಭ ಇದೇ ಭಾನುವಾರ (ಆ.11) ನಡೆಯಲಿದ್ದು, ಇದರಲ್ಲಿ ಭಾರತದ ಪರವಾಗಿ ಶೂಟರ್ ಮನು ಭಾಕರ್ ಅವರು ಭಾರತದ ಧ್ವಜ ಹಿಡಿದು ಸಾಗಲಿದ್ದಾರೆ.
ಪ್ರಸಕ್ತ ಪ್ಯಾರಿಸ್ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಸತತ ಎರಡು ಪದಕಗಳನ್ನು ಗೆದ್ದಿರುವ ಮನು ಭಾಕರ್ ಅವರು ಮುಕ್ತಾಯ ಸಮಾರಂಭದಲ್ಲಿ ಭಾರತ ಧ್ವಜ ಹಿಡಿದು ಸಾಗುವ ಗೌರವಕ್ಕೆ ಭಾಜನರಾಗಿದ್ದಾರೆ.
ಒಲಂಪಿಕ್ಸ್‌ನಲ್ಲಿ ಅದ್ಬುತ ಪ್ರದರ್ಶನ ತೋರಿರುವ ಭಾಕರ್ ಅವರು ಧ್ವಜ ಹಿಡಿಯುವ ಗೌರವಕ್ಕೆ ಅರ್ಹರು. ಭಾಕರ್ ಅವರು ಮುಕ್ತಾಯ ಸಮಾರಂಭದಲ್ಲಿ ಭಾರತ ಧ್ವಜ ಹಿಡಿದು ಸಾಗಲಿದ್ದಾರೆ ಎಂದು ಭಾರತೀಯ ಒಲಂಪಿಕ್ಸ್ ಸಂಸ್ಥೆ (ಐಒಎ) ಹೇಳಿಕೆ ನೀಡಿದೆ.
22 ವರ್ಷದ ಹರ್ಯಾಣದ ಮನು ಭಾಕರ್ ಅವರು ತಮ್ಮ ಚೊಚ್ಚಲ ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ 10 ಮೀ ಏರ್ ಪಿಸ್ತೂಲ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟರು. ಇದಾದ ಬಳಿಕ ಶರಬ್ಜೋತ್ ಸಿಂಗ್ ಜೊತೆ ಮಿಶ್ರ ಡಬಲ್ಸ್‌ನಲ್ಲಿಯೂ ಸಹಾ ಕಂಚಿನ ಪದಕ ಗೆದ್ದುಕೊಟ್ಟರು. ಭಾರತಕ್ಕೆ ಬಂದಿರುವ ಮೂರು ಮೆಡಲ್‌ಗಳು ಶೂಟಿಂಗ್‌ನಿಂದಲೇ ಬಂದಿದ್ದರೇ, ಅದರಲ್ಲಿ ಎರಡು ಪದಕಗಳನ್ನು ಭಾಕರ್ ಅವರು ಗೆದ್ದುಕೊಟ್ಟಿದ್ದಾರೆ.
ಇನ್ನು ಮುಕ್ತಾ ಸಮಾರಂಭದಲ್ಲಿ ಭಾರತ ಪರವಾಗಿ ಧ್ವಜ ಹಿಡಿಯಲಿರುವ ಪುರುಷ ಕ್ರೀಡಾಪಟು ಬಗ್ಗೆ ಯಾವುದೇ ಮಾಹಿತಿ ಈವರೆಗೆ ಲಭ್ಯವಾಗಿಲ್ಲ.