ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿ 2024ರ 2ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡ ಶಿವಮೊಗ್ಗ ಲಯನ್ಸ್ ವಿರುದ್ಧ 7 ರನ್‌ಗಳ ಅಂತರದಿಂದ ಗೆದ್ದು ಶುಭಾರಂಭ ಮಾಡಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 159 ರನ್ ಬಾರಿಸಿ ಎದುರಾಳಿ ತಂಡಕ್ಕೆ 160 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಶಿವಮೊಗ್ಗ ಲಯನ್ಸ್‌ಗೆ ಮಳೆ ಕಾಡಿತು. ಮಳೆಯಿಂದಾಗಿ ಪಂದ್ಯವನ್ನು 9 ಓವರ್ ಗಳಿಗೆ ಇಳಿಸಲಾಯಿತು ಮತ್ತು ಶಿವಮೊಗ್ಗ ಲಯನ್ಸ್‌ಗೆ 88 ರನ್ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಶಿವಮೊಗ್ಗ 9 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 80 ರನ್ ಗಳಿಸಿ 7 ರನ್ ಗಳ ಅಂತರದಿಂದ ಮೈಸೂರು ವಾರಿಯರ್ಸ್ ವಿರುದ್ಧ ಸೋಲು ಕಂಡಿತು.
ಮೈಸೂರು ವಾರಿಯರ್ಸ್ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ ತಂಡಕ್ಕೆ ಬಿರುಸಿನ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟರ್ ಕಾರ್ತಿಕ್ ಸಿಎ 3(8), ಹಾಗೂ ಎಸ್‌ಯು ಕಾರ್ತಿಕ್ 18(20) ರನ್ ಗಳಿಸಿ ಬೇಗನೇ ಔಟಾದರು. ಬಳಿಕ ಬಂದ ನಾಯಕ ಕರುಣ್ ನಾಯರ್ 18(16) ಬೇಗನೆ ಪೆವಿಲಿಯನ್ ಸೇರಿದರು.
ಮೊದಲ ಪಂದ್ಯದಲ್ಲೇ ವಾರಿಯರ್ಸ್ ತಂಡಕ್ಕೆ ಮಧ್ಯಮ ಕ್ರಮಾಂಕ ಕೈ ಕೊಟ್ಟಿತು. ಶಮಿತ್ ದ್ರಾವಿಡ್ 7(9), ಸುಮಿತ್ ಕುಮಾರ್ 14(14), ದರ್ಮಾನಿ 1(2), ಜೆ ಸುಚಿತ್ 11(9),ಕೆ ಗೌತಮ್ 21(19) ರನ್ ಗಳಿಸಿದರು.
ಕೊನೆಯಲ್ಲಿ ಒಂದಾದ ಮನೋಜ್ ಬಂಡ್ಗೆ ಹಾಗೂ ಕಿಶನ್ ಔಟಾಗದೇ ತಂಡವನ್ನು 150ರ ಗಡಿ ದಾಟಿಸಿದರು. ಬಂಡ್ಗೆ 42(16) ಮತ್ತು ಕಿಶನ್ 12(8) ರನ್ ಗಳಿಸಿದರು.
ಶಿವಮೊಗ್ಗ ಪರ ಹಾರ್ದಿಕ್ ರಾಜ್, ಪ್ರದೀಪ್ ಹಾಗೂ ಅವಿನಾಶ್ ತಲಾ ಎರಡು ವಿಕೆಟ್, ಆನಂದ್ ಒಂದು ವಿಕೆಟ್ ಪಡೆದು ಗಮನ ಸೆಳೆದರು.
ಶಿವಮೊಗ್ಗ ಇನ್ನಿಂಗ್ಸ್: 9 ಓವರ್‌ಗಳಲ್ಲಿ 88 ರನ್ ಗುರಿ ಬೆನ್ನತ್ತಿದ ಲಯನ್ಸ್‌ಗೆ ಅಭಿನವ್ ಮನೋಹರ್ ಹೊರತುಪಡಿಸಿ ಬೇರಾರಿಂದಲೂ ನಿರೀಕ್ಷಿತಾ ಆಟ ಕಂಡುಬರಲಿಲ್ಲ. ಮನೋಹರ್ 29 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್ ಸಹಿತ 52 ರನ್ ಬಾರಿಸಿ ಔಟಾದರು. ಬಳಿಕ ಬಂದ ಯಾರಿಂದಲೂ ತಂಡವನ್ನು ಗೆಲ್ಲಿಸಿಕೊಡಲು ಸಾಧ್ಯವಾಗಲಿಲ್ಲ. ನಾಯಕ ನಿಹಾಲ್ ಉಲ್ಲಾಳ್ ಡಕ್‌ಔಟ್ ಆದರೆ, ರೋಹಿತ್ 12(10) ರನ್ ಗಳಿಸಿ ನಿರ್ಗಮಿಸಿದರು. ಶಿವರಾಜ್ ಟಕ್‌ಔಟ್, ಅವಿನಾಶ್ ಡಿ 12(10) ರನ್ ಬಾರಿಸಿದರೇ, ಭುವನ್ ಔಟಾಗದೇ ಉಳಿದರು.
ಮೈಸೂರು ವಾರಿಯರ್ಸ್ ಪರ ಜೆ ಸುಜಿತ್ ಎರಡು, ವಿದ್ಯಾಧರ್ ಪಾಟೀಲ್ ಹಾಗೂ ಗೌತಮ್ ಮಿಶ್ರಾ ತಲಾ ಒಂದೊಂದು ವಿಕೆಟ್ ಪಡೆದರು.
ಪಂದ್ಯಶ್ರೇಷ್ಠ: ಮನೋಜ್ ಬಂಡ್ಗೆ





