ನಾಳೆ ( ನವೆಂಬರ್ 19 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಈ ಬಾರಿಯ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದ್ದು, ಈ ಬಾರಿ ಯಾವ ತಂಡ ಚಾಂಪಿಯನ್ ಆಗಲಿದೆ ಎಂಬ ಕಾತುರತೆ ಹೆಚ್ಚಾಗಿದೆ.
ಈ ಬಾರಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಒಟ್ಟು 10 ತಂಡಗಳ ಪೈಕಿ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದವು. ಈ ಪೈಕಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ಭಾರತ ಫೈನಲ್ ತಲುಪಿದ್ದು, ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಕಾಂಗರೂಗಳೂ ಸಹ ಫೈನಲ್ ತಲುಪಿದೆ.
ಹೀಗೆ ಸೆಮಿಫೈನಲ್ ಹಂತದವರೆಗೂ ಬಂದು ಟೂರ್ನಿಯಿಂದ ಹೊರಬಿದ್ದಿರುವ ಈ ಎರಡೂ ತಂಡಗಳೂ ಸಹ ಈ ಬಾರಿಯೂ ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವಲ್ಲಿ ವಿಫಲವಾಗಿವೆ. ಹಾಗಿದ್ದರೆ ಇಲ್ಲಿಯವರೆಗೂ ಒಮ್ಮೆಯೂ ವಿಶ್ವಕಪ್ ಟ್ರೋಫಿಯನ್ನು ಗೆಲ್ಲದೇ ಕಣಕ್ಕಿಳಿದು ಈ ಬಾರಿಯೂ ಸಹ ಚೋಕರ್ಸ್ ಆಗಿಯೇ ಮನೆಗೆ ತೆರಳಿದ ತಂಡಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..
ನ್ಯೂಜಿಲೆಂಡ್: 1975ರಿಂದಲೂ ವಿಶ್ವಕಪ್ ಆಡುತ್ತಾ ಬಂದಿರುವ ನ್ಯೂಜಿಲೆಂಡ್ ಇಲ್ಲಿಯವರೆಗೂ ಒಮ್ಮೆಯೂ ಸಹ ಟ್ರೋಫಿ ಎತ್ತಿಹಿಡಿಯಲು ಆಗಿಲ್ಲ. 2015ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಫೈನಲ್ ಪಂದ್ಯದಲ್ಲಿ ಸೋತು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ ನ್ಯೂಜಿಲೆಂಡ್ 2019ರಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿತ್ತು. ಹೀಗೆ ಕಳೆದ ಎರಡು ಬಾರಿ ಸತತವಾಗಿ ರನ್ನರ್ ಅಪ್ ಆಗಿದ್ದ ನ್ಯೂಜಿಲೆಂಡ್ ಈ ಬಾರಿ ಸೆಮಿಫೈನಲ್‌ನಲ್ಲಿ ಹೊರಬಿದ್ದು ಚೋಕರ್ ಆಗಿಯೇ ಉಳಿದುಕೊಂಡಿದೆ.
ದಕ್ಷಿಣ ಆಫ್ರಿಕಾ: ವಿಶ್ವಕಪ್‌ನಲ್ಲಿ ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಅಧಿಕೃತವಾಗಿ ಹೊತ್ತುಕೊಂಡಿರುವ ತಂಡವೆಂದರೆ ಅದು ದಕ್ಷಿಣ ಆಫ್ರಿಕಾ. ಎಷ್ಟೇ ಬಲಿಷ್ಟ ತಂಡದೊಂದಿಗೆ ಟೂರ್ನಿಗಳಲ್ಲಿ ಭಾಗವಹಿಸಿದ್ದರೂ ಸಹ ಈ ತಂಡಕ್ಕೆ ಟ್ರೋಫಿ ಎತ್ತಿ ಹಿಡಿಯುವುದಿರಲಿ ಒಮ್ಮೆಯೂ ಸಹ ಫೈನಲ್ ಅನ್ನೂ ಸಹ ಪ್ರವೇಶಿಸಲಾಗಿಲ್ಲ. ವಿಶ್ವಕಪ್‌ನಲ್ಲಿ ಈ ತಂಡದ ಅತಿದೊಡ್ಡ ಸಾಧನೆ ಎಂದರೆ ಸೆಮಿಫೈನಲ್ ಪ್ರವೇಶಿಸಿರುವುದು ಮಾತ್ರ. 1992, 1999, 2007, 2015 ಹಾಗೂ 2023 ಹೀಗೆ ಐದು ಬಾರಿ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸಿ ಫೈನಲ್ ಪ್ರವೇಶಿಸಲಾಗದೇ ಹೊರಬಿದ್ದಿದೆ.
ಬಾಂಗ್ಲಾದೇಶ: ಚೋಕರ್ಸ್ ಲಿಸ್ಟ್‌ನಲ್ಲಿರುವ ದೇಶಗಳಲ್ಲಿ ಬಾಂಗ್ಲಾದೇಶವೂ ಸಹ ಒಂದು. ನ್ಯೂಜಿಲೆಂಡ್ ಫೈನಲ್ ಹಾಗೂ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ವರೆಗೂ ಬಂದು ಎಡವಿದ್ದರೆ, ಬಾಂಗ್ಲಾದೇಶ ಒಮ್ಮೆಯೂ ಸೆಮಿಫೈನಲ್‌ಗೂ ಸಹ ಅರ್ಹತೆ ಪಡೆದುಕೊಳ್ಳಲಾಗದೇ ಹಿನ್ನಡೆ ಅನುಭವಿಸಿದೆ. ಈ ಕೆಟ್ಟ ಇತಿಹಾಸ ಈ ವರ್ಷವೂ ಸಹ ಮುಂದುವರಿದಿದೆ.