ಕೊಲ್ಕತ್ತಾ : ಭಾರತ ತಂಡ ನಾಯಕ ರೋಹಿತ್ ಶರ್ಮಾ 2024ರಲ್ಲಿ ಅಮೇರಿಕಾ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ವರೆಗೂ ಅವರೇ ನಾಯಕರಾಗಿ ಮುಂದುವರೆಯಬೇಕು ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಮತ್ತು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಭಾರತದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮನ್ನಡೆಸಿದ ರೋಹಿತ್ ಶರ್ಮಾ ಅವರ ಆಟದ ವೈಖರಿಗೆ ಪ್ರಭಾವಿತರಾಗಿರುವ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಅವರು ವಿಶ್ವಕಪ್ ನಲ್ಲಿ ರೋಹಿತ್ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದಾರೆ. ರೋಹಿತ್ ಅವರು ಎಲ್ಲಾ ಮಾದರಿಯಲ್ಲೂ ತಂಡಕ್ಕೆ ಲಭ್ಯರಾದ ಬಳಿಕ ತಂಡವನ್ನು ಅವರೇ ಮುನ್ನಡೆಸಬೇಕು. ಅವರು 2024 ರ ಟಿ20 ವಿಶ್ವಕಪ್ ವರೆಗೆ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ನಾನು ಭಾವಿಸುತ್ತೇನೆಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಇದೇ ವೇಳೆ ಬಿಸಿಸಿಐ ರಾಹುಲ್ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಆಗಿ ಅವಧಿ ವಿಸ್ತರಣೆ ಬಗ್ಗೆ ಮಾತನಾಡಿ, ಬಿಸಿಸಿಐ ರಾಹುಲ್ ದ್ರಾವಿಡ್ ಅವರ ಮೇಲೆ ತೋರಿಸಿರುವ ವಿಶ್ವಾಸ ಆಶ್ಚರ್ಯವೇನಲ್ಲ. ಆದರೆ, ರಾಹುಲ್ ಭಾರತ ತಂಡದ ಮುಖ್ಯ ಕೋಚ್ ಆಗಲು ಒಪ್ಪುತ್ತಾರೋ ಇಲ್ಲವೋ ಎಂಬುದು ನನ್ನನ್ನು ಸದಾ ಕಾಡುತ್ತಿತ್ತು ಎಂದು ತಿಳಿಸಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಆಡಿದ 10 ಪಂದ್ಯಗಳಲ್ಲಿಯೂ ಜಯ ಸಾಧಿಸಿದ್ದರು. ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್‌ಅಪ್ ಆದರು. ಟೂರ್ನಿಯುದ್ದಕ್ಕೂ ಡೇರ್ ಅಂಡ್ ಡ್ಯಾಶಿಂಗ್ ಆಟದ ಮೂಲಕ ಎಲ್ಲರ ಮನೆ ಮಾತಾಗಿದ್ದರು.
ಸದ್ಯ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡ ಪ್ರವಾಸ ಕೈಗೊಳ್ಳಲಿದ್ದು, ಟೆಸ್ಟ್, ಓಡಿಐ ಮತ್ತು ಟಿ20 ಮಾದರಿಗೆ ತಂಡ ಪ್ರಕಟಿಸಿದೆ. ಇದರಲ್ಲಿ ರೋಹಿತ್ ಶರ್ಮಾ ನಾಯಕರಾಗಿ ಟೆಸ್ಟ್ ನಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಏಕದಿನ ಮಾದರಿಗೆ ರಾಹುಲ್ ನಾಯಕರಾರೇ ಟಿ20 ನಾಯಕನ ಪಟ್ಟ ಸೂರ್ಯಕುಮಾರ್ ಯಾದವ್ ಪಾಲಾಗಿದೆ.