Mysore
26
overcast clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ನ್ಯೂಜಿಲೆಂಡ್ ವಿರುದ್ದದ ಕೊನೆಯ ಪಂದ್ಯ ಟೈ: ಭಾರತಕ್ಕೆ ಟಿ-20 ಸರಣಿ

ನೇಪಿಯರ್: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಟಿ20 ಪಂದ್ಯ ಟೈನಲ್ಲಿ ಕೊನೆಗೊಂಡಿದ್ದು ಟಿ-20 ಸರಣಿ 1-೦ ಅಂತರದಿಂದ ಭಾರತದ ವಶವಾಗಿದೆ.

ಎರಡನೇ ಇನಿಂಗ್ಸ್ ವೇಳೆ ಪಂದ್ಯಕ್ಕೆ ಮತ್ತೊಮ್ಮೆ ಮಳೆ ಅಡ್ಡಿಯಾಗಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಿ ಡಕ್ವರ್ತ್ ನಿಯಮದನ್ವಯ ಪಂದ್ಯ ಟೈ ಎಂದು ಘೋಷಿಸಲಾಯಿತು. ಈ ಹಂತದಲ್ಲಿ ನ್ಯೂಜಿಲೆಂಡ್ ನೀಡಿದ್ದ 161 ರನ್ಗಳ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ, 9 ಓವರ್ ಅಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 75 ರನ್ ಬಾರಿಸಿತ್ತು. 11 ಓವರ್ಗಳಲ್ಲಿ ಟೀಂ ಇಂಡಿಯಾ 86 ರನ್ ಬಾರಿಸಬೇಕಿತ್ತು.

ಕೊನೆಯ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಭಾರತ ತಂಡವು ಕೇವಲ 21 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್ಗಳ ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಶಾನ್ ಕಿಶನ್ ಕೇವಲ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ರಿಷಭ್ ಪಂತ್ ಬ್ಯಾಟಿಂಗ್ 11 ರನ್ಗಳಿಗೆ ಸೀಮಿತವಾಯಿತು. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಖಾತೆ ತೆರೆಯುವ ಮುನ್ನವೇ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಈ ವೇಳೆ 4ನೇ ವಿಕೆಟ್ಗೆ ಜತೆಯಾದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ 39 ರನ್ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ನಾಯಕ ಹಾರ್ದಿಕ್ ಪಾಂಡ್ಯ ಕೇವಲ 18 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಆಕರ್ಷಕ ಸಿಕ್ಸರ್ ಸಹಿತ ಅಜೇಯ 30 ರನ್ ಬಾರಿಸಿ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಇನ್ನು ಕಳೆದ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸಿದ್ದ ಸೂರ್ಯಕುಮಾರ್ ಯಾದವ್ ಕೇವಲ 13 ರನ್ ಬಾರಿಸಿ ಇಶ್ ಸೋಧಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಪಂದ್ಯ ಟೈನಲ್ಲಿ ಅಂತ್ಯ: ಪಂದ್ಯ ಮಳೆಯಲ್ಲಿ ನಿಂತಾಗ ನಾಯಕ ಹಾರ್ದಿಕ್ ಪಾಂಡ್ಯ 30* ಹಾಗೂ ದೀಪಕ್ ಹೂಡಾ 9 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದರು. ಡೆಕ್ವರ್ಥ್ ಲೂಯಿಸ್ ನಿಯಮದನ್ವಯ 9 ಓವರ್ ಅಂತ್ಯದ ವೇಳೆಗೆ ಭಾರತ ಗೆಲುವು ಸಾಧಿಸಬೇಕಿದ್ದರೆ 76 ರನ್ ಗಳಿಸಬೇಕಿತ್ತು. ಆದರೆ 75 ರನ್ ಗಳಿಸಿರುವುದರಿಂದ ಪಂದ್ಯವನ್ನು ಟೈ ಎಂದು ಘೋಷಿಸಲಾಯಿತು. ಹೀಗಾಗಿ ಟಿ20 ಸರಣಿ 1-0 ಅಂತರದಲ್ಲಿ ಭಾರತದ ಪಾಲಾಯಿತು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡವು ಡೆವೊನ್ ಕಾನ್ವೇ ಹಾಗೂ ಗ್ಲೆನ್ ಫಿಲಿಫ್ಸ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ 19.4 ಓವರ್ಗಳಲ್ಲಿ 160 ರನ್ ಬಾರಿಸಿ ಸರ್ವಪತನ ಕಂಡಿತ್ತು. ಟೀಂ ಇಂಡಿಯಾ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಆರ್ಶದೀಪ್ ಸಿಂಗ್ ತಲಾ 4 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!