ಕೊಡಗು: ಅಂತರಾಷ್ಟ್ರೀಯ ಟೆನ್ನಿಸ್ ಜಗತ್ತಿನ ವರ್ಲ್ಡ್ ಕಪ್ ಎಂದೇ ಹೆಸರು ಪಡೆದಿರುವ ಟೆನ್ನಿಸ್ ಟೀಮ್ ಇವೆಂಟ್ ಪ್ರತಿಷ್ಠಿತ ಡೇವಿಸ್ ಕಪ್‍ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು 4-0 ರಿಂದ ಸೋಲಿಸಿ ವರ್ಲ್ಡ್ ಕಪ್ ಗ್ರೂಪ್ 1ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
28ರ ಹರೆಯದ ಕೊಡಗಿನ ಕಲಿಯಂಡ ನಿಕ್ಕಿ ಪೂಣಚ್ಚ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ತಂಡದ ವಿಜಯದಲ್ಲಿ ಭಾಗಿಯಾಗಿದ್ದಾರೆ.
60 ವರ್ಷಗಳ ಬಳಿಕ ಭಾರತ ಡೇವಿಸ್ ಕಪ್ ತಂಡವು ಪಾಕಿಸ್ತಾನಕ್ಕೆ ತೆರಳಿದ್ದು, ಆತಿಥೇಯ ತಂಡವನ್ನು ಭಾನುವಾರ 4 ಪಂದ್ಯಗಳಲ್ಲೂ ಸೋಲಿಸಿ ಡೇವಿಸ್ ಕಪ್‍ನ ವಲ್ರ್ಡ್ ಗ್ರೂಪ್ 1ರಲ್ಲಿ ಸ್ಥಾನ ಪಡೆದುಕೊಂಡಿದೆ.
ಇದರಲ್ಲಿ 4ನೇ ಪಂದ್ಯದ ಸಿಂಗಲ್ಸ್ ವಿಭಾಗದಲ್ಲಿ, ಕೊಡಗಿನ ಕಲಿಯಂಡ ನಿಕ್ಕಿ ಪೂಣಚ್ಚ ಅವರು ಎದುರಾಳಿ ಮಹಮ್ಮದ್ ಶೋಯಬ್ ಅವರನ್ನು 6-3, 6-4ರ ನೇರ ಸೆಟ್‍ಗಳಲ್ಲಿ ಮಣಿಸಿ ತಂಡದ ಗೆಲುವಿಗೆ ಕೈ ಜೋಡಿಸಿದರು.
ಡಬಲ್ಸ್ ವಿಭಾಗದಲ್ಲಿ ಭಾರತದ ಯುಕಿ ಬಾಂಬ್ರಿ – ಸಾಕೆತ್ ಮೈನೆನಿ ಜೋಡಿ ಗೆಲುವು ಸಾಧಿಸಿದರು. ಸಿಂಗಲ್ಸ್‍ನಲ್ಲಿ ರಾಮ್ ಕುಮಾರ್ ರಾಮನಾಥಾನ್, ಎನ್.ಶ್ರೀರಾಮ್ ಬಾಲಾಜಿ ಹಾಗೂ ಮೊದಲ ಬಾರಿ ಡೇವಿಸ್ ಕಪ್ ಆಡುತ್ತಿರುವ ನಿಕ್ಕಿ ಪೂಣಚ್ಚ ಅವರು ಗೆಲುವಿನ ನಗೆ ಬೀರಿದರು.
ಮೂಲತ ಮಡಿಕೇರಿ ತಾಲೂಕಿನ ಕಕ್ಕಬ್ಬೆಯವರಾದ ಕಲಿಯಂಡ ನಿಕ್ಕಿ ಪೂಣಚ್ಚ ಅವರು ಆಂಧ್ರದ ಅನಂತಪುರದಲ್ಲಿ ನೆಲೆಸಿರುವ ಕಲಿಯಂಡ ಪೂಣಚ್ಚ ಹಾಗೂ ವೀಣಾ ದಂಪತಿಯ ಪುತ್ರ.





