Mysore
23
few clouds

Social Media

ಗುರುವಾರ, 02 ಏಪ್ರಿಲ 2026
Light
Dark

ಕೆಕೆಆರ್‌ಗೆ ಮುಖಭಂಗ ; ಮೊದಲ ಗೆಲುವು ದಾಖಲಿಸಿದ ಎಸ್‌ಆರ್‌ಎಚ್‌

ಕೋಲ್ಕತ್ತಾ : ಹೆನ್ರಿಚ್ ಕ್ಲಾಸೆನ್ ಅರ್ಧಶತಕದಾಟ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರ ಆಲ್‌ರೌಂಡರ್ ಆಟದ ನೆರವಿನಿಂದ ಅತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 65 ರನ್‌ಗಳಿಂದ ಮಣಿಸಿದ ಸನ್ ರೈಸರ್ಸ್ ಹೈದರಾಬಾದ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಇತ್ತ ಕೆಕೆಆರ್ ತವರಿನಲ್ಲಿ ತಾನಾಡಿದ ಮೊದಲೆರೆಡು ಪಂದ್ಯಗಳಲ್ಲಿಯೂ ಸೋಲನನುಭವಿಸಿತು.

ಇಲ್ಲಿನ ಈಡೆನ್ ಗಾರ್ಡನ್ ಮೈದಾನದಲ್ಲಿ ಗುರುವಾರ ನಡೆದ 19ನೇ ಆವೃತ್ತಿಯ ಐಪಿಎಲ್-2026ರ 6ನೇ ಲೀಗ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್‌ಗೆ ಉತ್ತಮ ಆರಂಭ ದೊರೆಯಿತು. ಆರಂಭಿಕ ಬ್ಯಾಟರ್‌ಗಳಾದ ಟ್ರಾವಿಸ್ ಹೆಡ್ 21 ಎಸೆತಗಳಲ್ಲಿ 46 ಹಾಗೂ ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ 48 ರನ್ ಗಳಿಸಿ ಮೊದಲ ವಿಕೆಟ್‌ಗೆ 82ರನ್‌ಗಳ ಜೊತೆಯಾಟ ನೀಡಿದರು.

ಬಳಿಕ ಬಂದ ನಾಯಕ ಇಶಾನ್ ಕಿಶನ್ 14ರನ್, ಅನಿಕೇತ್ ವರ್ಮಾ 1ರನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಈ ವೇಳೆ ಒಂದಾದ ಹೆನ್ರಿಚ್ ಕ್ಲಾಸೆನ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಉಪಯುಕ್ತ ಆಟವಾಡಿದರು. ಈ ಜೋಡಿ 53 ಎಸೆತಗಳಲ್ಲಿ 82 ರನ್ ಕೂಡಿಸಿದರು. ನಿತೀಶ್ ಕುಮಾರ್ ರೆಡ್ಡಿ 39ರನ್ ಗಳಿಸಿದರೆ, ಕ್ಲಾಸೆನ್ 35 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 39 ರನ್ ಗಳಿಸಿದರು. ಉಳಿದಂತೆ ಸೈಲ್ ಅರೋರಾ ಗೋಲ್ಡನ್ ಡಕ್, ಶಿವಾಂಗ್ ಕುಮಾರ್ 4, ಹರ್ಷ್ ದುಬೆ ಅಜೇಯ 9 ರನ್ ಬಾರಿಸುವ ಮೂಲಕ ಎಸ್‌ಆರ್‌ಹೆಚ್ ನಿಗದಿತ 20 ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತು.

ಕೆಕೆಆರ್ ಪರ ಮುಜರಬಾನಿ ಪ್ರಮುಖ 4 ವಿಕೆಟ್ ಕಬಳಿಸಿ ಮಿಂಚಿದರು. ವೈಭವ್ ಅರೋರಾ 2, ಕಾರ್ತಿಕ್ ತ್ಯಾಗಿ ಹಾಗೂ ಅಂಕುಲ್ ರಾಯ್ ತಲಾ ಒಂದೊಂದು ವಿಕೆಟ್ ಪಡೆದು ಗಮನ ಸೆಳೆದರು.

ಈ ಬೃಹತ್ ಮೊತ್ತ ಬೆನ್ನತ್ತಿದ ಕೆಕೆಆರ್‌ಗೆ ಫಿನ್ ಅಲೆನ್ ಭರ್ಜರಿ ಆರಂಭ ಒದಗಿಸಿದರು. ಮೊದಲ ಓವರ್‌ನ 5 ಎಸೆತಗಳಲ್ಲಿ ಬರೋಬ್ಬರಿ 24 ರನ್ ಚಚ್ಚಿದರು. ಕೇವಲ 7 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 28 ರನ್ ಗಳಿಸಿ ನಿರ್ಗಮಿಸಿದರು. ಇವರ ಬೆನ್ನಲ್ಲೆ ನಾಯಕ ಅಜಿಂಕ್ಯಾ ರಹಾನೆ 8 ರನ್‌ಗೆ ಔಟಾದರು. 2 ರನ್ ಗಳಿಸಿದ್ದ ಕ್ಯಾಮರೋನ್ ಗ್ರೀನ್ ಇಲ್ಲದ ರನ್ ಕದಿಯಲು ಹೋಗಿ ರನ್ ಔಟ್ ಆಗಿ ಪೆವಿಲಿಯನ್ ಸೇರಿದರು.

ಈ ವೇಳೆ ಏಕಾಂಗಿಯಾಗಿ ಹೋರಾಟ ನೀಡಿದ ಅಂಗ್‌ಕ್ರಿಶ್ ರಘುವಂಶಿ 29 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 52 ರನ್ ಗಳಿಸಿ ರನ್‌ಔಟ್ ಬಲೆಗೆ ಬಿದ್ದರು. ಇವರ ಹಿಂದೆಯೇ ಅಂಕುಲ್ ರಾಯ್ ಡಕ್‌ಔಟ್ ಆಗಿ ಹೊರ ನಡೆದರು.

ಕೊನೆಯಲ್ಲಿ ಅಲ್ಪ ಹೋರಾಟ ತೋರಿದ ರಿಂಕು ಸಿಂಗ್ 25 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರು. ಬಳಿಕ ಮತ್ಯಾರಿಂದಲೂ ನಿರೀಕ್ಷಿತ ಆಟ ಕಂಡುಬರಲಿಲ್ಲ. ಉಳಿದಂತೆ ರಮಣ್‌ದೀಪ್ ಸಿಂಗ್ 10, ಸುನೀಲ್ ನರೈನ್ 12, ಕಾರ್ತಿಕ್ ತ್ಯಾಗಿ 5, ವರುಣ್ ಚಕ್ರವರ್ತಿ ಗೋಲ್ಡನ್ ಡಕ್ ಹಾಗೂ ವೈಭವ್ ಅರೋರಾ ಅಜೇಯ 1 ರನ್ ಗಳಿಸಿದರು.

ಅಂತಿಮವಾಗಿ ಕೆಕೆಆರ್ 16 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 161 ರನ್ ಗಳಿಸಿ 65 ರನ್ ಗಳ ಭಾರೀ ಅಂತರದಿಂದ ಸೋಲೊಪ್ಪಿಕೊಂಡರು.

Tags:
error: Content is protected !!