Mysore
20
overcast clouds
Light
Dark

ಟಿ20 ವಿಶ್ವಕಪ್‌ನಲ್ಲಿ ಎರಡು ತಂಡಗಳಿಗೆ ನಂದಿನಿ ಪ್ರಾಯೋಜಕತ್ವ: ಇದರಲ್ಲಿ ಟೀಂ ಇಂಡಿಯಾಗಿಲ್ಲ ಸ್ಥಾನ?!

ಮೈಸೂರು: ಇದೇ ಜೂನ್‌ 1ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ನ ಎರಡು ತಂಡಗಳಿಗೆ ಕರ್ನಾಟಕದ ಖ್ಯಾತ ಹಾಲು ಉತ್ಪನ್ನ ಒಕ್ಕೂಟವೊಂದು ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ.

ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್‌) ತನ್ನ ಬ್ರಾಂಡ್‌ನ್ನು ಪ್ರಪಂಚದಾದ್ಯಂತ ವಿಸ್ತಾರಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಒಂದಾದ ಟಿ20 ವಿಶ್ವಕಪ್‌ ನಲ್ಲಿ ತನ್ನ ಬ್ರಾಂಡ್‌ ಬಗ್ಗೆ ಪ್ರಚಾರ ಮಾಡಲು ಕೆಎಂಎಫ್‌ ಮುಂದಾಗಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್‌ ಹಾಗೂ ಐರ್ಲೆಂಡ್‌ ತಂಡಗಳ ಜೆರ್ಸಿ ಮೇಲೆ ಪ್ರಾಯೋಜಕರಾಗಿ ನಂದಿನಿ ಹೆಸರು ಕಾಣಿಸಿಕೊಳ್ಳಲಿದೆ. ಆ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಬ್ರಾಂಡ್‌ ವ್ಯಾಲೂ ಹೆಚ್ಚಿಸಲು ಕೆಎಂಎಫ್‌ ಮುಂದಾಗಿದೆ.

ಇನ್ನು ಈ ಬಗ್ಗೆ ಮನಿ ಕಂಟ್ರೋಲ್‌ ಜೊತೆ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ ಜಗದೀಶ್‌ ಮಾತನಾಡಿ, ಈ ಬಾರಿಯ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಕೆಎಂಎಫ್‌ ಸ್ಕಾಡ್ಲೆಂಡ್‌ ಹಾಗೂ ಐರ್ಲೆಂಡ್‌ ತಂಡಗಳಿಗೆ ಪ್ರಾಯೋಜಕತ್ವ ವಹಿಸುವ ಬಗ್ಗೆ ನಿನ್ನೆ (ಏ.20) ಐಟಿಡಬ್ಲ್ಯೂ ಕನ್ಸಲ್ಟಿಂಗ್‌ ಪ್ರೈ.ಲಿಗೆ ಆದೇಶ ನೀಡಿದ್ದೇವೆ.

ಇದರನ್ವಯ ಈ ಎರಡು ತಂಡದ ಆಟಗಾರರ ಜೆರ್ಸಿಯ ಲೀಡ್‌ ಆರ್ಮ್‌ನಲ್ಲಿ (ಬಲಗೈ ಬ್ಯಾಟರ್‌ನ ಎಡ ಭಾಗ ಹಾಗೂ ಎಡಗೈ ಬ್ಯಾಟರ್‌ನ ಬಲ ಭಾಗದಲ್ಲಿ ಲೋಗೋ ಕಂಡು ಬರಲಿದೆ) ನಂದಿನಿ ಲೋಗೋ ಕಾಣಿಸಿಕೊಳ್ಳಲಿದೆ. ಇದು ಪ್ರತಿಯೊಬ್ಬ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಸಿಂಗಾಪುರ, ಮಿಡಲ್‌ ಈಸ್ಟ್‌ ದೇಶಗಳಲ್ಲಿ ತನ್ನ ಪ್ರಾಬಲ್ಯ ಮೆರೆದಿರುವ ನಂದಿನಿ, ಈ ವಿಶ್ವಕಪ್‌ ಮೂಲಕ ತನ್ನ ಸಿಹಿ ತಿಂಡಿಗಳು ಹಾಗೂ ಉತ್ಪನ್ನಗಳ ಮೂಲಕ ಯುಎಸ್‌ಎ ಮಾರುಕಟ್ಟೆಗೆ ಕಾಲಿಡಲು ಸಜ್ಜಾಗುತ್ತಿದೆ. ಮತ್ತು ಅಲ್ಲಿ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲಿದೆ ಎಂದು ಜಗದೀಶ್‌ ಹೇಳಿದ್ದಾರೆ. ಇದರ ಜೊತೆಗೆ ಟಿ20 ವಿಶ್ವಕಪ್‌ ಸಮಯದಲ್ಲಿ ನಂದಿನಿ ಹಾಲಿನಿಂದ ತಯಾರಾದ “ಸ್ಪ್ಲಾಶ್‌” ಎನರ್ಜಿ ಡ್ರಿಂಕ್‌ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ.