ಹೊಸದಿಲ್ಲಿ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಅಧ್ಯಕ್ಷರಾಗಿ ಜಯ್ ಶಾ ಅವರು ಭಾನುವಾರ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಈ ಮೂಲಕ ಐಸಿಸಿ ಗದ್ದುಗೆಗೆ ಏರಿದ ಅತ್ಯಂತ ಕಿರಿಯ ಹಾಗೂ 5ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಜಯ್ ಶಾ ಪಾತ್ರರಾಗಿದ್ದಾರೆ.
ಜಯ್ ಶಾ ಇದೇ ವರ್ಷದ ಆಗಸ್ಟ್‌ನಲ್ಲಿ ಐಸಿಸಿ ಅಧ್ಯ ಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಹಿಂದಿನ ಅಧ್ಯಕ್ಷರ ಅವಧಿ ಮುಗಿಯುವವರೆಗೆ ತಾತ್ಕಾಲಿಕವಾಗಿದ್ದ ಅವರ ಅಧಿಕಾರ ಈಗ ಅಧಿಕೃತವಾಗಿದೆ ಎಂದು ಐಸಿಸಿ ಪ್ರಕಟಿಸಿದೆ.
ಬಿಸಿಸಿಐ ಕಾರ್ಯದರ್ಶಿಯಾಗಿ ಭಾರತೀಯ ಕ್ರಿಕೆಟ್ ಅನ್ನು ಉತ್ತುಂಗಕ್ಕೇರಿಸಿದ ಜಯ್ ಶಾ, ಇದೀಗ ಐಸಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದು, ಚಾಂಪಿಯನ್ಸ್ ಟ್ರೋಫಿ ಸಂಬಂಧ ಇರುವ ವಿವಾದ ಇವರ ಹಾಜರಾತಿಯಲ್ಲಿ ನಡೆಯಲಿದೆ.
2019ರಲ್ಲಿ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೇರಿದ ಜಯ್ ಶಾ, 6 ವರ್ಷಗಳ ಕಾಲ ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸಿದ್ದಾರೆ. ಭಾರತದಲ್ಲಿ ಐಪಿಎಲ್ ಜನಪ್ರಿಯಗೊಂಡು ವಿಶ್ವದಾದ್ಯಂತ ಮನ್ನಣೆ ಗಿಟ್ಟಿಸಿಕೊಳ್ಳವಲ್ಲಿ ಜಯ್ ಶಾ ಅವರ ಪಾತ್ರ ದೊಡ್ಡದಿದೆ. 2021 ಜನವರಿಯಿಂದ ಏಷ್ಯನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಆಗಿದ್ದರು.
ಈಗ ಜಯ್ ಶಾ ಅವರ ಅಧಿಕಾರಾವಧಿಯಲ್ಲಿ ಮೊದಲ ಐಸಿಸಿ ಚಾಂಪಿಯನ್ಸ್ ಟ್ರೋಫಿಯಾಗಿದ್ದು, ಈ ಟೂರ್ನಿಯ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ ಸದ್ಯ ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಸಮಸ್ಯೆಯನ್ನು ಇವರ ಅಧ್ಯಕ್ಷತೆಯಲ್ಲಿ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.





