ಚೆನ್ನೈ: ಐಪಿಎಲ್‌ನ 18ನೇ ಆವೃತ್ತಿಯ ಚೆನ್ನೈ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಆ ಮೂಲಕ ಚೆಪಾಕ್ ಮೈದಾನದಲ್ಲಿ 17 ವರ್ಷಗಳ ನಂತರ ಮೊದಲ ಗೆಲುವು ದಾಖಲಿಸಿದೆ.
ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ತಂಡ ಎದುರಾಳಿ ಆರ್‌ಸಿಬಿಯನ್ನು ಬ್ಯಾಟಿಂಗ್ ಆಹ್ವಾನಿಸಿದರು.
ಅದರಂತೆ ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ತಂಡದ ನಾಯಕ ರಜತ್ ಪಾಟೀದಾರ್ 51(32) ಅವರ ಅರ್ಧಶತಕದ ನೆರವಿನ ಜೊತೆಗೆ ಫಿಲ್ ಸಾಲ್ಟ್ 32(16), ವಿರಾಟ್ ಕೊಹ್ಲಿ 31(30), ದೇವದತ್ ಪಡಿಕ್ಕಲ್ 27(14), ಕೊನೆಯಲ್ಲಿ ಟಿಮ್ ಡೆವಿಡ್ 22(8) ಅವರ ಆಟದ ನೆರವಿನಿಂದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 196 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.
ಚೆನ್ನೈ ಪರ ನೂರ್ ಅಹ್ಮದ್ 3 ವಿಕೆಟ್ ಪಡೆದರೆ ಮಥೀಶಾ ಪತಿರಾನ 2 ವಿಕೆಟ್, ಅಶ್ವಿನ್ ಹಾಗೂ ಖಲೀಲ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ ಚೆನ್ನೈ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್‌ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈ ಪರ ಆರಂಭಿಕ ಬ್ಯಾಟರ್ ರಚಿನ್ ರವೀಂದ್ರ 41(31) ರನ್‌ಗಳಿಸಿ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ, ಯಶ್ ದಯಾಳ್ ಅವರ ಬೌಲಿಂಗ್‌ನಲ್ಲಿ ಓಟಾಗುವ ಮೂಲಕ ಚೆನ್ನೈನ ಗೆಲುವಿನ ಆಸೆ ಕಮರಿತು. ಕೊನೆಯಲ್ಲಿ ಮಹೇಂದ್ರ ಸಿಂಗ್ ಧೋನಿ 16 ಎಸೆತಗಳಲ್ಲಿ 30 ರನ್‌ಗಳಿಸಿ ಔಟಾಗದೇ ಉಳಿದರು.
ಆರ್‌ಸಿಬಿ ತಂಡದ ಪರ ಜೋಶ್ ಹ್ಯಾಜಲ್‌ವುಡ್ 3 ವಿಕೆಟ್ ಪಡೆದರೆ, ಯಶ್ ದಯಾಳ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ತಲಾ ಎರಡು ವಿಕೆಟ್ ಗಳಿಸಿದರು.