ನವದೆಹಲಿ : 2024 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೂ ಮುನ್ನಾ ಆಟಗಾರರ ಮಿನಿ ಹರಾಜು ಡಿಸೆಂಬರ್ 19 ರಂದು ಮೊಟ್ಟ ಮೊದಲ ಬಾರಿಗೆ ದುಬೈ ನಲ್ಲಿ ನಡೆಯಲಿದೆ. ನವೆಂಬರ್ 30 ರವರೆಗೆ ಹರಾಜಿನಲ್ಲಿ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ನೀಡಿತ್ತು. ಅದರಂತೆ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಹಂಚಿಕೊಂಡ ರಿಜಿಸ್ಟರ್‌ನಲ್ಲಿ ಒಟ್ಟು 1,166 ಆಟಗಾರರು ತಮ್ಮ-ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.
ಈ ಬಾರಿ ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಅನೇಕ ಆಟಗಾರರು ಸಹಾ ಐಪಿಎಲ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇವುಗಳಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್, ಟ್ರಾವಿಸ್ ಹೆಡ್, ನ್ಯೂಜಿಲೆಂಡ್‌ನ ರಚಿನ್ ರವೀಂದ್ರ, ಡೇರಿಯಲ್ ಮಿಚೆಲ್ ಸೇರಿದಂತೆ ಹಲವಾರು ಆಟಗಾರರು ತಮ್ಮ ಹೆಸರನ್ನು ಸೇರಿಸಿದ್ದಾರೆ.
ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಅವರು 2015ರ ಐಪಿಎಲ್ ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಐಪಿಎಲ್ ನಲ್ಲಿ ಆಡುವ ಆಸಕ್ತಿಯೊಂದಿಗೆ ತಮ್ಮ ಹೆಸರನ್ನು ಸಹಾ ನೋಂದಾಯಿಸಿಕೊಂಡಿದ್ದಾರೆ.
1166 ಆಟಗಾರರ ಪೈಕಿ 77 ಸ್ಲಾಟ್‌ಗಳಿಗೆ ಆಯ್ಕೆಯಾಗಲಿರುವ ಅದೃಷ್ಟಶಾಲಿ ಆಟಗಾರರು ಯಾರು ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. 1,166 ಆಟಗಾರರ ಪೈಕಿ 830 ಭಾರತೀಯ ಆಟಗಾರರಿದ್ದರೆ, 336 ವಿದೇಶಿ ಆಟಗಾರರು ಇದ್ದಾರೆ. ಈ ಪಟ್ಟಿಯಲ್ಲಿ 212 ಕ್ಯಾಪ್ಡ್, 909 ಅನ್‌ಕ್ಯಾಪ್ಡ್ ಮತ್ತು 45 ಅಸೋಸಿಯೇಟ್ ದೇಶದ ಆಟಗಾರರು ಸೇರಿದ್ದಾರೆ. 77 ಸ್ಥಾನಗಳಿಗೆ, 47 ದೇಶಿ ಆಟಗಾರರು ಮತ್ತು ಗರಿಷ್ಠ 30 ವಿದೇಶಿ ಆಟಗಾರರನ್ನು ಬಿಡ್ ಮೂಲಕ ಪಡೆಯಬುದಾಗಿದೆ.
830 ಭಾರತೀಯ ಕ್ರಿಕೆಟಿಗರ ಪೈಕಿ ವರುಣ್ ಆರೋನ್, ಕೆಎಸ್ ಭರತ್, ಕೇದಾರ್ ಜಾಧವ್, ಸಿದ್ದಾರ್ಥ್ ಕೌಲ್, ಧವಳ್ ಕುಲಕರ್ಣಿ, ಶಿವಂ ಮಾವಿ, ಶಹಬಾಜ್ ನದೀಮ್, ಕರುಣ್ ನಾಯರ್, ಮನೀಶ್ ಪಾಂಡೆ, ಹರ್ಷಲ್ ಪಟೇಲ್, ಚೇತನ್ ಸಕರಿಯಾ, ಮನ್ದೀಪ್ ಸಿಂಗ್, ಬರೀಂದರ್ ಸ್ರಾನ್ ಇದ್ದರೆ, ಇವರ ಜೊತೆಗೆ ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್, ಹನುಮ ವಿಹಾರಿ, ಸಂದೀಪ್ ವಾರಿಯರ್ ಮತ್ತು ಉಮೇಶ್ ಯಾದವ್ ಕೂಡಾ ಹರಾಜಿನಲ್ಲಿ ಅದೃಷ್ಟ ಪರೀಕ್ಷೆ ಎದುರಿಸಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಭಾರತೀಯರ ಪೈಕಿ ಹರ್ಷಲ್ ಪಟೇಲ್, ಕೇದಾರ್ ಜಾಧವ್, ಶಾರ್ದುಲ್ ಠಾಕೂರ್ ಮತ್ತು ಉಮೇಶ್ ಯಾದವ್ ಕೇವಲ ನಾಲ್ವರು ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂ. ಹಾಗೂ ಉಳಿದ 14 ಮಂದಿ ತಮ್ಮ ಬಿಡ್ಡಿಂಗ್ ಅನ್ನು 50 ಲಕ್ಷದಿಂದ ಪ್ರಾರಂಭಿಸಲಿದ್ದಾರೆ. ಹರಾಜಿನಲ್ಲಿ ಸೇರಿಸಲು ಬಯಸುವ ಆಟಗಾರರ ಪಟ್ಟಿಯೊಂದಿಗೆ ರಿಜಿಸ್ಟರ್‌ಗೆ ಪ್ರತಿಕ್ರಿಯಿಸುವಂತೆ ಫ್ರಾಂಚೈಸಿಗಳಿಗೆ ಬಿಸಿಸಿಐ ಸೂಚನೆ ನೀಡಿದೆ.
ಲೈವ್:
ಸ್ಟಾರ್ ಸ್ಪೋರ್ಟ್ಸ್: ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆ.
ಆನ್‌ಲೈನ್ ಲೈವ್ ಸ್ಟ್ರೀಮಿಂಗ್: JioCinema