ಕೊಲ್ಕತ್ತಾ: ಫಿಲ್ ಸಾಲ್ಟ್, ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಆಕರ್ಷಕ ಅರ್ಧಶತಕದಾಟದ ಬಲದಿಂದ ಆತಿಥೇಯ ಕೊಲ್ಕತ್ತಾ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿದ ಆರ್‌ಸಿಬಿ ಐಪಿಎಲ್ ಸೀಸನ್ 18 ರಲ್ಲಿ ಶುಭಾರಂಭ ಮಾಡಿದೆ.
ಇಲ್ಲಿನ ಈಡೆನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಣ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿ ಆರ್‌ಸಿಬಿಗೆ 175 ರನ್‌ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತ ಬೆನ್ನತ್ತಿದ ಆರ್‌ಸಿಬಿ 16.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 177 ರನ್ ಕಲೆಹಾಕಿ 7 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತು.
ಕೆಕೆಆರ್ ಇನ್ನಿಂಗ್ಸ್: ಡಿಕಾಕ್ ಮತ್ತು ಸುನೀಲ್ ನರೈನ್ ಕೆಕೆಆರ್ ಪರ ಇನ್ನಿಂಗ್ಸ್ ಆರಂಭಿಸಿದರು. ಆದರೆ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಡಿಕಾಕ್ 4 ರನ್ ಗಳಿಸಿ ಹೇಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಜೊತೆಯಾದ ನಾಯಕ ಅಜಿಂಕೆ ರಹಾನೆ ಮತ್ತು ಸುನೀಲ್ ನರೈನ್ ಆರ್‌ಸಿಬಿ ಬೌಲರ್‌ಗಳನ್ನು ಕಾಡಿದರು.
ರಹಾನೆ 31 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ 56 ರನ್ ಗಳಿಸಿದರು. ಸುನೀಲ್ ನರೈನ್ 26 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಿತ 44 ರನ್ ಗಳಿಸಿ ಔಟಾಗಿ ಹೊರನಡೆದರು. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಬಂದ ಯಾರೂ ಉತ್ತಮ ಇನ್ನಿಂಗ್ಸ್ ಕಟ್ಟಿಕೊಡಲಿಲ್ಲ.
ವೆಂಕಟೇಶ್ ಅಯ್ಯರ್ 6, ಕಿಂಕು 12, ರಸೆಲ್ 4 ರನ್ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ರಘುವಂಶಿ 30 ರನ್ ಗಳಿಸಿ ತಂಡದ ಮೊತ್ತ 150ರ ಗಡಿ ದಾಟಲು ಸಹಕರಿಸಿದರು. ಹರ್ಷಿತ್ ರಾಣಾ 5, ರಮಣದೀಪ್ ಹಾಗೂ ಸ್ಪೆನ್ಸರ್ ಔಟಾಗದೇ ತಲಾ 6 ಮತ್ತು 1 ರನ್ ಗಳಿಸಿ ಉಳಿದರು.
ಆರ್‌ಸಿಬಿ ಪರ ಕೃನಾಲ್ ಪಾಂಡ್ಯ ಮೂರು ವಿಕೆಟ್, ಹೆಜಲ್‌ವುಡ್ ಎರಡು ವಿಕೆಟ್, ಸುಯೇಶ್ ಶರ್ಮಾ, ರಸಿಕ್ ದಾರ್ ಹಾಗೂ ಯಶ್ ದಯಾಳ್ ತಲಾ ಒಂದೊಂದು ವಿಕೆಟ್ ಪಡೆದರು.
ಆರ್‌ಸಿಬಿ ಇನ್ನಿಂಗ್ಸ್: ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಆರ್‌ಸಿಬಿಗೆ ಆರಂಭಿಕರಾದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಭದ್ರ ಬುನಾದಿ ಹಾಕಿಕೊಟ್ಟರು. ಈ ಜೋಡಿ ಪವರ್ ಪ್ಲೇನಲ್ಲಿ ಬರೋಬ್ಬರಿ 80 ರನ್ ಗಳಿಸಿದರು.
ಫಿಲ್ ಸಾಲ್ಟ್ 31 ಎಸೆತ, 9 ಬೌಂಡರಿ, 2 ಸಿಕ್ಸರ್ ಸಹಿತ 56 ರನ್ ಗಳಿಸಿ ಔಟಾದರು. ಬಳಿಕ ಬಂದ ದೇವದತ್ ಪಡಿಕ್ಕಲ್ 10, ನಾಯಕ ರಜತ್ ಪಟಿದಾರ್ 34 ರನ್ ಬಾರಿಸಿ ತಂಡದ ಗೆಲುವಿಗೆ ಸಹಕರಿಸಿದರು.
ಮತ್ತೊಂದೆಡೆ ಉಪಯುಕ್ತ ಆಟವಾಡಿದ ವಿರಾಟ್ ಕೊಹ್ಲಿ ಔಟಾಗದೇ 36 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 59 ರನ್ ಗಳಿಸಿದರೇ, ಇತ್ತ ಲಿವಿಂಗ್‌ಸ್ಟೋನ್ ಔಟಾಗದೇ 5 ಎಸೆತಗಳಲ್ಲಿ 15 ರನ್ ಬಾರಿಸಿ ಗೆಲುವಿನ ದಡ ಸೇರಿಸಿದರು.
ಕೆಕೆಆರ್ ಪರ ಸುನೀಲ್ ನರೈನ್, ವೈಭವ್ ಅರೋರಾ ಮತ್ತು ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಪಡೆದರು.





