Mysore
15
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

IPL 2025 | ಕೋಲ್ಕತ್ತಗೆ 80 ರನ್‌ಗಳ ಜಯ ; ಸನ್‌ರೈಸರ್ಸ್‌ಗೆ ಹೀನಾಯ ಸೋಲು

ಕೋಲ್ಕತ್ತಾ: ರಘುವಂಶಿ, ವೆಂಕಟೇಶ್‌ ಅಯ್ಯರ್‌ ಅವರ ಅಮೋಘ ಬ್ಯಾಟಿಂಗ್‌, ಅರೋರಾ ಹಾಗೂ ವರುಣ್‌ ಚಕ್ರವರ್ತಿ ಅವರ ಮಾರಕ ದಾಳಿಯ ನೆರವಿನಿಂದ ಬಲಿಷ್ಠ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಅತಿಥೇಯ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡ 80 ರನ್‌ಗಳ ಅಂತರದಿಂದ ಬಗ್ಗು ಬಡಿಯಿತು.

ಇಲ್ಲಿನ ಈಡೆನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತ್ತಾ ನೈಟ್‌ರೈಡರ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ನಡುವಣ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 200 ರನ್‌ ಕಲೆಹಾಕಿತು. ಇದನ್ನು ಬೆನ್ನತ್ತಿದ ಎಸ್‌ಆರ್‌ಎಚ್‌ 16.4 ಓವರ್‌ಗಳಲ್ಲಿ ಆಲ್‌ಔಟ್‌ ಆಗುವ ಮೂಲಕ 120 ರನ್‌ ಗಳಿಸಿ 80 ರನ್‌ಗಳ ಅಂತರದಿಂದ ಹೀನಾಯ ಸೋಲು ಕಂಡಿತು.

ಕೆಕೆಆರ್‌ ಇನ್ನಿಂಗ್ಸ್‌: ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಇಳಿದ ಕೆಕೆಆರ್‌ ಪರ ಸುನೀಲ್‌ ನರೈನ್‌ ಹಾಗೂ ಡಿಕಾಕ್‌ ಇನ್ನಿಂಗ್ಸ್‌ ಆರಂಭಿಸಿದರು. ಆದರೆ ಈ ಇಬ್ಬರು ಆಟಗಾರರು ಭದ್ರ ಇನ್ನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ನರೈನ್‌ 7(7) ರನ್‌ ಗಳಿಸಿ ಔಟಾದರೇ, ಡಿಕಾಕ್‌ 1(6) ರನ್‌ ಗಳಿಸಿ ಬಂದಷ್ಟೆ ವೇಗವಾಗಿ ಹಿಂತಿರುಗಿದರು.

ಬಳಿಕ ಒಂದಾದ ನಾಯಕ ಅಜಿಂಕ್ಯಾ ರಹಾನೆ ಹಾಗೂ ರಘುವಂಶಿ ಉತ್ತಮ ಜೊತೆಯಾಟ ನೀಡಿದರು. ಈ ಜೋಡಿ 80 ರನ್‌ಗಳ ಜೊತೆಯಾಟ ನೀಡಿತು. ಇದರಲ್ಲಿ ರಹಾನೆ 38(27), ರಘುವಂಶಿ 50(32) ಅರ್ಧಶತಕ ಗಳಿಸಿ ಔಟಾದರು.

ಕೊನೆಯಲ್ಲಿ ಭರ್ಜರಿಯಾಗಿ ಬ್ಯಾಟ್‌ ಬೀಸಿದ ವೆಂಕಟೇಶ್‌ ಅಯ್ಯರ್‌ 29 ಎಸೆತಗಳಲ್ಲಿ 7ಬೌಂಡರಿ, 3 ಸಿಕ್ಸರ್‌ ಸಹಿತ 60 ರನ್‌ ಬಾರಿಸಿದರು. ಇವರಿಗೆ ರಿಂಕು ಸಿಂಗ್‌ ಔಟಾಗದೇ 32(17) ರನ್‌ ಗಳಿಸಿ ಸಾಥ್‌ ನೀಡಿದರು. ರಸೆಲ್‌ 1(2) ರನ್‌ ಗಳಿಸಿದರು.

ಹೈದರಾಬಾದ್‌ ಪರ ನಾಯಕ ಕಮಿನ್ಸ್‌, ಶಮಿ, ಅನ್ಸಾರಿ, ಹರ್ಷಲ್‌ ಪಟೇಲ್‌ ಹಾಗೂ ಕಮಿಂದು ಮೆಂಡೀಸ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಎಸ್‌ಆರ್‌ಎಚ್‌ ಇನ್ನಿಂಗ್ಸ್‌: ಬೃಹತ್‌ ಮೊತ್ತ ಬೆನ್ನತ್ತಿದ ಎಸ್‌ಆರ್‌ಎಚ್‌ಗೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಬ್ಯಾಟರ್‌ ಟ್ರಾವಿಸ್‌ ಹೆಡ್‌ 4(2) ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಅಭಿಷೇಕ್‌ ಶರ್ಮಾ 2(6), ಇಶಾನ್‌ ಕಿಸಾನ್‌ 2(5) ರನ್‌ ಗಳಿಸಿ ಬಂದಷ್ಟೆ ವೇಗವಾಗಿ ಪೆವಿಲಿಯನ್‌ ಪೆರೇಡ್‌ ನಡೆಸಿದರು. ಕೇವಲ 2.1 ಓವರ್‌ಗಳಲ್ಲಿ ಎಸ್‌ಆರ್‌ಎಚ್‌ ತನ್ನ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಹೈದರಾಬಾದ್‌ ಪರ ಹೆನ್ರಿಚ್‌ ಕ್ಲಾಸೆನ್‌ 33(21) ಗಳಿಸಿದ ರನ್‌ ವೈಯಕ್ತಿಕ ಗರಿಷ್ಠ ರನ್‌ ಆಗಿತ್ತು. ಮತ್ತೊಮ್ಮೆ ಮಧ್ಯಮ ಕ್ರಮಾಂಕ ಕೈಕೊಟ್ಟ ಕಾರಣ ಹೈದರಾಬಾದ್‌ ಸೋಲು ಅನುಭವಿಸಿತು. ನಿತೀಶ್‌ ಕುಮಾರ್‌ ರೆಡ್ಡಿ 19(15), ಕಮಿಂದು ಮೆಂಡೀಸ್‌ 27(20), ಅನಿಕೇತ್‌ ವರ್ಮಾ 6(6), ಪ್ಯಾಟ್‌ ಕಮಿನ್ಸ್‌ 14(15), ಹರ್ಷಲ್‌ ಪಟೇಲ್‌ 3(5), ಸಮರ್ಜಿತ್‌ ಸಿಂಗ್‌ ಡಕ್‌ಔಟ್‌, ಮೊಹಮ್ಮದ್‌ ಶಮಿ ಔಟಾಗದೇ 2(4) ರನ್‌ ಗಳಿಸಿದರು.

ಕೆಕೆಆರ್‌ ಪರ ವೈಭವ್‌ ಅರೋರಾ, ವರುಣ್‌ ಚಕ್ರವರ್ತಿ ತಲಾ ಮೂರು ವಿಕೆಟ್‌, ರಸೆಲ್‌ ಎರಡು ವಿಕೆಟ್‌, ಸುನೀಲ್‌ ನರೈನ್‌ ಹಾಗೂ ಹರ್ಷಿತ್‌ ರಾಣಾ ತಲಾ ಒಂದೊಂದು ವಿಕೆಟ್‌ ಪಡೆದರು.

Tags:
error: Content is protected !!