ಗುವಾಹಟಿ: ಸಂಘಟಿತ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನದ ಸಹಾಯದಿಂದ ಅತಿಥೇಯ ರಾಜಸ್ಥಾನ್ ರಾಯಲ್ಸ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿದ ಕೆಕೆಆರ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮತ್ತೊಂದೆಡೆ ಆರ್‌ಆರ್ ತಾನಾಡಿದ ಮೊದಲೆರೆಡು ಪಂದ್ಯಗಳಲ್ಲಿಯೂ ಸೋತು ನಿರಾಸೆ ಅನುಭವಿಸಿದೆ.
ಇಲ್ಲಿನ ಬಾರ್ಸಪರ ಕ್ರೀಡಾಂಗಣದಲ್ಲಿ ನಡೆದ ಕೆಕೆಆರ್ ಮತ್ತು ಆರ್‌ಆರ್ ನಡುವಣ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಆರ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಕೆಕೆಆರ್ 17.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿ 8 ವಿಕಟ್‌ಗಳ ಅಂತರದಿಂದ ಗೆಲುವು ದಾಖಲಿಸಿತು.
ಆರ್‌ಆರ್ ಇನ್ನಿಂಗ್ಸ್: ತನ್ನ ತವರು ನೆಲದಲ್ಲಿ ಇನ್ನಿಂಗ್ಸ್ ಆರಂಭಿಸಿದ ಆರ್‌ಆರ್‌ಗೆ ನಿರೀಕ್ಷಿತ ಆರಂಭ ಕಂಡುಬರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಸ್ಯಾಮ್ಸನ್ 13(11), ಜೈಸ್ವಾಲ್ 29(24) ರನ್ ಗಳಿಸಿ ವೇಗವಾಗಿ ಔಟಾದರು.
ನಂತರ ಬಂದ ನಾಯಕ ರಿಯಾನ್ ಪರಾಗ್ ಅಬ್ಬರಿಸುವ ಹಾಗೆ ಕಂಡರೂ 25(15) ರನ್ ಗಳಿಸಿ ಔಟಾದರು. ತಂಡಕ್ಕೆ ಮತ್ತೊಮ್ಮೆ ಮಧ್ಯಮ ಕ್ರಮಾಂಕ ಕೈಕೊಟ್ಟಿತು. ಧ್ರುವ್ ಜುರೆಲ್ 33(28) ರನ್ ಗಳಿಸಿದ್ದೆ ತಂಡದ ಪರ ವೈಯಕ್ತಿಕ ಗರಿಷ್ಠ ರನ್ ಆಗಿತ್ತು.
ಉಳಿದಂತೆ ನಿತೀಶ್ ರಾಣಾ 8(9), ವನಿಂದು ಹಸರಂಗ 4(4), ಶುಭಂ ದುಬೆ 9(12), ಹೆಟ್ಮಾಯರ್ 7(8), ಜೋಫ್ರಾ ಆರ್ಚರ್ 16(7) ರನ್ ಗಳಿಸಿ ಔಟಾದರು. ತೀಕ್ಷಣ ಹಾಗೂ ತುಷಾರ್ ದೇಶ್‌ಪಾಂಡೆ ಔಟಾಗದೇ 1(1) ಮತ್ತು 2(1) ರನ್ ಕಲೆಹಾಕಿದರು.
ಕೆಕೆಆರ್ ಪರ ವರುಣ್ ಚಕ್ರವರ್ತಿ, ಮೋಯಿನ್ ಅಲಿ, ಹರ್ಷಿತ್ ರಣಾ, ವೈಭವ್ ಅರೋರಾ ತಲಾ 2 ವಿಕೆಟ್ ಪಡೆದರು.
ಕೆಕೆಆರ್ ಇನ್ನಿಂಗ್ಸ್: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಕೆಕೆಆರ್‌ಗೆ ಕ್ವಿಂಟನ್ ಡಿ ಕಾಕ್ ಆಸರೆಯಾದರು. ಆರಂಭಿಕ ಬ್ಯಾಟರ್ ಮೊಯೀನ್ ಅಲಿ 5(12) ರನ್ ಗಳಿಸಿ ಇಲ್ಲದ ರನ್ ಕದಿಯಲು ಹೋಗಿ ರನ್‌ಔಟ್ ಆಗಿ ಹೊರ ನಡೆದರು. ಬಳಿಕ ಬಂದ ನಾಯಕ ಅಜಿಂಕ್ಯಾ ರಹಾನೆ 18(15) ಕೂಡಾ ಹೆಚ್ಚುಹೊತ್ತು ನಿಲ್ಲಲಿಲ್ಲ.
ನಂತರ ಒಂದಾದ ಕ್ವಿಂಟನ್ ಡಿ ಕಾಕ್ ಹಾಗೂ ರಘುವಂಶಿ ತಂಡದ ದಿಕ್ಕನ್ನೇ ಬದಲಾಯಿಸಿದರು. ತಮ್ಮ ಬಲವಾದ ಹೊಡೆತಗಳ ಮೂಲಕ ಆರ್‌ಆರ್ ಬೌಲರ್‌ಗಳನ್ನು ಕಾಡಿದರು. ಡಿಕಾಕ್ ಔಟಾಗದೇ 61 ಎಸೆತಗಳಲ್ಲಿ 8 ಬೌಂಡರಿ ಹಾಗೂ ಭರ್ಜರಿ 6 ಸಿಕ್ಸರ್ ಸಹಿತ 97 ರನ್ ಗಳಿಸಿದರು. ರಘುವಂಶಿ 22(17) ರನ್ ಗಳಿಸಿ ಔಟಾಗದೇ ಉಳಿದು ಡಿಕಾಕ್‌ಗೆ ಸಾಥ್ ನೀಡಿದರು.
ಆರ್‌ಆರ್ ಪರ ಹಸರಂಗ ಒಂದು ವಿಕೆಟ್ ಪಡೆದರು.