ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ ಅವರ ಅಜೇಯ ಅರ್ಧಶತಕದಾಟದ ಬಲದಿಂದ ಅತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ.
ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ 18ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ಎದುರಾಳಿ ತಂಡಕ್ಕೆ 164 ರನ್ ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 17.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ 6ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತು.
ಆರ್‌ಸಿಬಿ ಇನ್ನಿಂಗ್ಸ್: ಉತ್ತಮ ಆರಂಭದ ನಡುವೆಯೂ ಮಧ್ಯಮ ಕ್ರಮಾಂಕ ದಿಢೀರ್ ಕುಸಿತ ಕಂಡ ಕಾರಣ ಡೆಲ್ಲಿ ವಿರುದ್ಧ ಬೃಹತ್ ಮೊತ್ತ ಕಲೆಹಾಕುವ ಸೂಚನೆ ನೀಡಿದ್ದ ಆರ್‌ಸಿಬಿ ಕೇವಲ ನೂರೈವತ್ತರ ಗಡಿ ದಾಟಲು ಮಾತ್ರ ಶಕ್ತವಾಯಿತು. ಆರಂಭಿಕ ಆಟಗಾರ ಫಿಲ್ ಸಾಲ್ಟ್ 37(17), ವಿರಾಟ್ ಕೊಹ್ಲಿ 22(14) ರನ್ ಬಾರಿಸಿ ಪೆವಿಲಿಯನ್ ಸೇರಿದರು. ದೇವ್‌ದತ್ ಪಡಿಕ್ಕಲ್ 1(8) ಸುಸ್ತಾದರೇ, ಲಿವಿಂಗ್‌ಸ್ಟೋನ್ 4(6), ಜಿತೇಶ್ ಶರ್ಮಾ 3(11) ರನ್ ಗಳಿಸಿ ಮರಳಿದರು.
ನಾಯಕ ರಜತ್ ಪಾಟೀದರ್ 25(23), ಕೃನಾಲ್ ಪಾಂಡ್ಯ 18(18) ರನ್ ಗಳಿಸಿ ಔಟಾದರೇ, ಕೊನೆಯಲ್ಲಿ ಅಬ್ಬರಿಸಿದ ಟಿಮ್ ಡೇವಿಡ್ ಔಟಾಗದೇ 20 ಎಸೆತಗಳಲ್ಲಿ 37 ರನ್ ಬಾರಿಸಿದರು. ಭುವಿ 1(4) ರನ್ ಗಳಿಸಿ ಸ್ಕ್ರೀಸ್‌ನಲ್ಲಿ ಉಳಿದರು.
ಡೆಲ್ಲಿ ಪರ ವಿಪ್ರಾಜ್ ನಿಗಮ್ ಹಾಗೂ ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್, ಮುಖೇಶ್ ಕುಮಾರ್ ಮತ್ತು ಮೋಹಿತ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.
ಡೆಲ್ಲಿ ಇನ್ನಿಂಗ್ಸ್: ಆರ್‌ಸಿಬಿ ನೀಡಿದ್ದ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಡೆಲ್ಲಿಗೆ ಕನ್ನಡಿಗ ಕೆ.ಎಲ್ ರಾಹುಲ್ ಆಸರೆಯಾದರು. ರಾಹುಲ್ ಅವರು ಅಜೇಯ 53 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಸಹಿತ 93 ರನ್ ಬಾರಿಸಿದರೇ, ಸ್ಟಬ್ಸ್ 23 ಎಸೆತಗಳಲ್ಲಿ 38 ರನ್ ಬಾರಿಸಿ ಡೆಲ್ಲಿಗೆ ಗೆಲುವು ತಂದುಕೊಟ್ಟರು.
ಉಳಿದಂತೆ ಫಾಫ್ 2(7), ಫ್ರೆಸರ್ ಮೆಕ್‌ಗಾರ್ಕ್ 7(6), ಅಭಿಷೇಕ್ ಪೂರೆಲ್ 7(7) ಮತ್ತು ನಾಯಕ ಅಕ್ಷರ್ ಪಟೇಲ್ 15(11) ರನ್ ಗಳಿಸಿದರು.
ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ ಎರಡು ವಿಕೆಟ್, ಯಶ್ ದಯಾಳ್ ಹಾಗೂ ಸುಯೇಶ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.
ಪಂದ್ಯಶ್ರೇಷ್ಠ: ಕೆ.ಎಲ್ ರಾಹುಲ್





