ವಿಶಾಖಪಟ್ಟಣಂ: ಇಂಪ್ಯಾಕ್ಟ್ ಪ್ಲೇಯರ್ ಅಶುತೋಷ್ ಶರ್ಮಾ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ತಂಡ ರೋಚಕ ಹಣಾಹಣಿಯಲ್ಲಿ ಒಂದು ವಿಕೆಟ್‌ಗಳ ಅಂತರದಿಂದ ಲಖನೌ ತಂಡವನ್ನು ಮಣಿಸುವ ಮೂಲಕ ಮೊದಲ ಗೆಲುವು ದಾಖಲಿಸಿ ಶುಭಾರಂಭ ಮಾಡಿತು.
ಇಲ್ಲಿನ ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಖನೌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಕೆಲಹಾಕಿತು. ಈ ಮೊತ್ತ ಬೆನ್ನತ್ತಿದ ಡೆಲ್ಲಿ 19.3 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 211 ರನ್ ಗಳಸಿ 1 ವಿಕೆಟ್‌ಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿತು.
ಲಖನೌ ಪರ ಮಿಚೆಲ್ ಮಾರ್ಷ್ 72(36), ನಿಕೋಲಸ್ ಪೂರನ್ 75(30) ರನ್ ಗಳ ನೆರವಿನಿಂದ ತಂಡ ಇನ್ನೂರರ ಗಡಿ ದಾಟಲು ಸಹಕರಿಸಿದರು. ಮಾರ್ಕ್ರಂ 15, , ಮಿಲ್ಲರ್ 27, ಆಯುಷ್ ಬದೋನಿ 4, ಶಹಬಾಜ್ ಅಹ್ಮದ್ 9, ನಾಯಕ ಪಂತ್, ರವಿ ಬಿಷ್ಣೋಯ್ ಹಾಗೂ ಶಾರ್ದುಲ್ ಠಾಕೂರ್ ಸೇರಿದಂತೆ ಮೂವರು ಬ್ಯಾಟ್ಸ್‌ಮನ್‌ಗಳು ಡಕ್‌ಔಟ್ ಆದರು.
ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ ಮೂರು, ಕುಲ್ದೀಪ್ ಯಾದವ್ ಎರಡು, ಮುಖೇಶ್ ಕುಮಾರ್ ಹಾಗೂ ವಿಪ್ರಾವ್ ನಿಗಮ್ ತಲಾ ಒಂದೊಂದು ವಿಕೆಟ್ ಪಡೆದರು.
ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಡೆಲ್ಲಿಗೆ ಆರಂಭಿಕ ಆಘಾತ ಎದುರಾಯಿತು. ಜೇಕ್ ಫ್ರೆಸರ್ ಕೇವಲ ಒಂದು ರನ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ನಂತರ ಬಂದ ಅಭಿಷೇಕ್ ಪೂರೆಲ್ ಡಕ್‌ಔಟ್ ಹೊರನಡೆದರು. ಸಮೀರ್ ರಿಜ್ವಿ ನಾಲ್ಕು ರನ್‌ಗಳಿಗೆ ಸುಸ್ತಾಗುವ ಮೂಲಕ ತಂಡವನ್ನು ಸಂಕಷ್ಟಕ್ಕೆ ದೂಡಿದರು. ಡೆಲ್ಲಿ ಕೇವಲ 8 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು.
ಬಳಿಕ ಜೊತೆಯಾದ ಫಾಫ್ ಡು ಪ್ಲೆಸಿ ಹಾಗೂ ನಾಯಕ ಅಕ್ಷರ್ ಪಟೇಲ್ ತಂಡಕ್ಕೆ ಚೇತರಿಕೆ ಆಟವಾಡಿದರು. ಈ ಇಬ್ಬರು ಕ್ರಮವಾಗಿ 29(18) ಮತ್ತು 22(11) ರನ್ ಗಳಿಸಿ ಔಟಾದರು. ನಂತರ ಸ್ಟಬ್ಸ್ 34(22), ವಿಪ್ರಾಜ್ ನಿಗಮ್ 39(15), ಮಿಚೆಲ್ ಸ್ಟಾರ್ಕ್ 2, ಕಲ್ದೀಪ್ ಯಾದವ್ 5 ರನ್ ಗಳಿಸಿ ಔಟಾದರು.
ಆದರೆ ಮತ್ತೊಂದೆಡೆ ಛಲ ಬಿಡದೇ ಬ್ಯಾಟ್ ಬೀಸಿದ ಇಂಪ್ಯಾಕ್ಟ್ ಪ್ಲೇಯರ್ ಅಶುತೋಶ್ ಶರ್ಮಾ ಔಟಾಗದೇ 31 ಎಸತಗಳಲ್ಲಿ 5 ಬೌಂಡರಿ 5 ಸಿಕ್ಸರ್ ಸಹಿತ 66 ರನ್ ಬಾರಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಮೋಹಿತ್ ಶರ್ಮಾ ಒಂದು ರನ್ ಗಳಿಸಿ ಔಟಾಗದೇ ಉಳಿದರು.
ಲಖನೌ ಪರ ಶಾರ್ದುಲ್ ಠಾಕೂರ್, ಸಿದ್ಧಾರ್ಥ್, ದಿಗ್ವೇಶ್ ಹಾಗೂ ರವಿ ಬಿಷ್ಣೋಯ್ ತಲಾ ಎರಡೆರೆಡು ವಿಕೆಟ್ ಕಬಳಿಸಿದರು.