Mysore
19
few clouds
Light
Dark

ಐಪಿಎಲ್‌ 2024 ಟೂರ್ನಿಗೆ ವರ್ಣರಂಜಿತ ಚಾಲನೆ

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಬಹು ನಿರೀಕ್ಷಿತ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 17ನೇ ಆವೃತ್ತಿಗೆ ವರ್ಣರಂಜಿತ ಚಾಲನೆ ದೊರೆಯಿತು. ಉದ್ಘಾಟನಾ ಸಮಾರಂಭದಲ್ಲಿ ಮೊದಲಿಗೆ ನಟರಾದ ಅಕ್ಷಯ್‌ ಕುಮಾರ್‌ ಹಾಗೂ ಟೈಗರ್‌ ಶ್ರಾಫ್‌ ಹಲವು ಬಾಲಿವುಡ್‌ ಹಾಡುಗಳಿಗೆ ಹೆಜ್ಜೆ ಹಾಕಿದರು, ಸಾಹಸ ನೃತ್ಯಗಳನ್ನೂ ಸಹ ಮಾಡಿ ಕ್ರೀಡಾಭಿಮಾನಿಗಳಿಗೆ ಮನರಂಜನೆ ನೀಡಿದರು. ದೇಶಭಕ್ತಿ ಗೀತೆಗೆ ರಾಷ್ಟ್ರಧ್ವಜ ಹಿಡಿದು ಕ್ರೀಡಾಂಗಣವನ್ನು ಒಂದು ಸುತ್ತು ಹಾಕಿ ಸಂಭ್ರಮಿಸಿದರು.

 

ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್‌ ʼವಂದೇ ಮಾತರಂʼ ಹಾಡಿ ರಂಜಿಸಿದರು. ಎಆರ್‌ ರೆಹಮಾನ್‌ ಸಹ ಸೋನು ನಿಗಮ್‌ ಜತೆ ಸೇರಿ ವಂದೇ ಮಾತರಂ ಹಾಡಿ ಬಳಿಕ ತಮ್ಮ ಸಂಯೋಜನೆಯ ಕೆಲ ಹಾಡುಗಳನ್ನು ಹಾಡಿದರು. ಗಾಯಕರಾದ ಮೋಹಿತ್‌ ಚೌಹಾಣ್‌, ಗಾಯಕಿಯರಾದ ನೀತಿ ಮೋಹನ್‌, ಶ್ರೇಯಾ ಘೋಷಾಲ್‌ ಸಹ ಈ ಕಾರ್ಯಕ್ರಮದಲ್ಲಿ ಹಾಡುಗಳನ್ನು ಹಾಡಿ ರಂಜಿಸಿದರು. ಎಆರ್‌ ರೆಹಮಾನ್‌ ಸಂಯೋಜನೆಯ ಜೈಹೋ ಹಾಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಗಾಯಕರೂ ದನಿಗೂಡಿಸುವ ಮೂಲಕ ಮನರಂಜನಾ ಪ್ರದರ್ಶನಕ್ಕೆ ತೆರೆ ಎಳೆದರು. ಕ್ರೀಡಾಂಗಣದಲ್ಲಿ ಬಣ್ಣ ಬಣ್ಣದ ಬೃಹತ್‌ ಪಟಾಕಿಗಳನ್ನು ಸಿಡಿಸಲಾಯಿತು. ನೇರಪ್ರಸಾರದ ವೇಳೆ ಎಡಿಟಿಂಗ್‌ ಮೂಲಕ ಚಂದ್ರಯಾನ, ಇಂಡಿಯಾ ಗೇಟ್‌ ತೋರಿಸಲಾಯಿತು.

ನಂತರ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಕಾರ್ಯದರ್ಶಿ ಜಯ್‌ ಶಾ, ಐಪಿಎಲ್‌ ಅಧ್ಯಕ್ಷ ಅರುಣ್‌ ಧುಮಾಲ್‌, ಗಾಯಕರಾದ ಸೋನು ನಿಗಮ್‌, ಎಆರ್‌ ರೆಹಮಾನ್‌, ನಟರಾದ ಅಕ್ಷಯ್‌ ಕುಮಾರ್‌, ಟೈಗರ್‌ ಶ್ರಾಫ್‌ ವೇದಿಕೆಗೆ ಆಗಮಿಸಿದರು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಾಯಕ ಫಾಫ್‌ ಡುಪ್ಲೆಸಿಸ್‌ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ನೂತನ ನಾಯಕ ರುತುರಾಜ್‌ ಗಾಯಕ್ವಾಡ್‌ ಟ್ರೋಫಿಯೊಂದಿಗೆ ವೇದಿಕೆಯನ್ನೇರಿದರು. ಈ ಮೂಲಕ ಕ್ರಿಕೆಟ್‌ ಪ್ರಿಯರ ನೆಚ್ಚಿನ ಐಪಿಎಲ್ ಹೊಸ ಆವೃತ್ತಿಯನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

Tags: