Mysore
20
overcast clouds
Light
Dark

ಐಪಿಎಲ್‌ 2024: ಮುಂಬೈ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಸನ್‌ರೈಸರ್ಸ್;‌ ಆರ್‌ಸಿಬಿ ಅತಿಹೆಚ್ಚು ರನ್‌ ದಾಖಲೆ ಉಡೀಸ್‌

ಹೈದರಾಬಾದ್:‌ ಇಲ್ಲಿನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ 8ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ 31 ರನ್‌ಗಳ ಗೆಲುವನ್ನು ದಾಖಲಿಸಿದೆ.

ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ಬೌಲಿಂಗ್‌ ಆಯ್ದುಕೊಂಡು ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಸನ್‌ರೈಸರ್ಸ್‌ ತನ್ನ ಬ್ಯಾಟ್ಸ್‌ಮನ್‌ಗಳ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 277 ರನ್‌ ಕಲೆಹಾಕಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ 278 ರನ್‌ಗಳ ದಾಖಲೆಯ ಗುರಿಯನ್ನು ನೀಡಿತು. ಈ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್‌ ಐಪಿಎಲ್‌ ಇತಿಹಾಸದಲ್ಲಿ ಅತಿಹೆಚ್ಚು ರನ್‌ ಬಾರಿಸಿದ ತಂಡ ಎಂಬ ದಾಖಲೆ ನಿರ್ಮಿಸಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ 11 ವರ್ಷಗಳ ಹಿಂದಿನ ಬೃಹತ್‌ ದಾಖಲೆಯನ್ನು ಮುರಿಯಿತು. ಈ ಬೃಹತ್‌ ಗುರಿಯನ್ನು ಬೆನ್ನಟ್ಟುವ ಯತ್ನ ಮಾಡಿ ಅಂತಿಮ ಹಂತದಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 246 ರನ್‌ ಕಲೆಹಾಕಿತು.

ಸನ್‌ರೈಸರ್ಸ್‌ ಹೈದರಾಬಾದ್:‌ ತಂಡದ ಪರ ಮಯಾಂಕ್‌ ಅಗರ್ವಾಲ್‌ ಮತ್ತು ಟ್ರಾವಿಸ್‌ ಹೆಡ್‌ ಆರಂಭಿಕರಾಗಿ ಕಣಕ್ಕಿಳಿದರು. ಮಯಾಂಕ್‌ 11 (13) ರನ್‌ಗೆ ಔಟ್‌ ಆದರು. ಬಳಿಕ ಕಣಕ್ಕಿಳಿದ ಎಲ್ಲಾ ನಾಲ್ವರೂ ಬ್ಯಾಟ್ಸ್‌ಮನ್‌ಗಳೂ ಅಬ್ಬರಿಸಿ ಬೊಬ್ಬಿರಿದರು. ಆರಂಭದಿಂದ ಅಂತ್ಯದವರೆಗೂ ಮುಂಬೈ ಇಂಡಿಯನ್ಸ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಟ್ರಾವಿಸ್‌ ಹೆಡ್ 24 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 62 ರನ್‌ ಬಾರಿಸಿದರೆ, ಅಭಿಷೇಕ್‌ ಶರ್ಮಾ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್‌ ಸಹಿತ 63 ರನ್‌ ಬಾರಿಸಿದರು. ಏಡನ್‌ ಮಾರ್ಕ್ರಮ್‌ 28 ಎಸೆತಗಳಲ್ಲಿ ಅಜೇಯ 42 ರನ್‌ ಬಾರಿಸಿದರು ಮತ್ತು ಹೆನ್ರಿಕ್‌ ಕ್ಲಾಸೆನ್‌ 34 ಎಸೆತಗಳಲ್ಲಿ 4 ಬೌಂಡರಿ ಹಾಗೂ 7 ಸಿಕ್ಸರ್‌ ಸಹಿತ ಅಜೇಯ 80 ರನ್‌ ಬಾರಿಸಿ ಅಬ್ಬರಿಸಿದರು.

ಮುಂಬೈ ಇಂಡಿಯನ್ಸ್‌ ಪರ ಜಸ್‌ಪ್ರೀತ್‌ ಬುಮ್ರಾ ಹೊರತುಪಡಿಸಿ ಉಳಿದೆಲ್ಲಾ ಬೌಲರ್‌ಗಳೂ 11ಕ್ಕಿಂತ ಹೆಚ್ಚಿನ ಎಕಾನಮಿಯಲ್ಲಿ ಬೌಲಿಂಗ್‌ ಮಾಡಿ ದುಬಾರಿಯಾದರು. ಹಾರ್ದಿಕ್‌ ಪಾಂಡ್ಯ, ಗೆರಾಲ್ಡ್‌ ಸೋಟ್ಜೆ ಹಾಗೂ ಪಿಯೂಷ್‌ ಚಾವ್ಲಾ ತಲಾ ಒಂದೊಂದು ವಿಕೆಟ್‌ ಪಡೆದರು.

ಮುಂಬೈ ಇಂಡಿಯನ್ಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿರಾಗಿ ಕಣಕ್ಕಿಳಿದ ಇಶಾನ್‌ ಕಿಶನ್‌ ಹಾಗೂ ರೋಹಿತ್‌ ಶರ್ಮಾ ಆರಂಭದಲ್ಲಿ ಅಬ್ಬರಿಸಿದರೂ ಬೇಗನೆ ವಿಕೆಟ್‌ ಒಪ್ಪಿಸಿದರು. ಇಶಾನ್‌ ಕಿಶನ್‌ 34 (13) ರನ್‌, ರೋಹಿತ್‌ 26 (12) ರನ್‌ ಗಳಿಸಿದರು. ಮೂರನೇ ವಿಕೆಟ್‌ಗೆ ಜತೆಯಾದ ನಮನ್‌ ಧೀರ್‌ ಹಾಗೂ ತಿಲಕ್‌ ವರ್ಮಾ 31 ಎಸೆತಗಳಲ್ಲಿ 84 ರನ್‌ಗಳ ಜತೆಯಾಟವಾಡಿ ಗೆಲುವಿನ ಭರವಸೆ ಹುಟ್ಟುಹಾಕಿದರು. ನಮನ್‌ ಧೀರ್‌ 30 (14) ರನ್‌ ಗಳಿಸಿ ಔಟ್‌ ಆದರೆ, ತಿಲಕ್‌ ವರ್ಮಾ 64 (34) ರನ್‌ ಬಾರಿಸಿದರು. ನಾಯಕ ಪಾಂಡ್ಯ 24 (20) ರನ್‌ ಕಲೆಹಾಕಿದರು. ರೊಮಾರಿಯೊ ಶೆಫರ್ಡ್‌ ಅಜೇಯ 15 (6) ರನ್‌ ಹಾಗೂ ಅಂತಿಮ ಹಂತದಲ್ಲಿ ಚೇಸಿಂಗ್ ಭರವಸೆ ಮೂಡಿಸಿದ್ದ ಟಿಮ್‌ ಡೇವಿಡ್‌ ಅಜೇಯ 42 (22) ರನ್‌ ದಾಖಲಿಸಿದರು.

ಸನ್‌ರೈಸರ್ಸ್‌ ಹೈದರಾಬಾದ್‌ ಪರ ನಾಯಕ ಪ್ಯಾಟ್‌ ಕಮಿನ್ಸ್‌ ಹಾಗೂ ಜಯದೇವ್‌ ಉನಾದ್ಕತ್‌ ತಲಾ ಎರಡು ವಿಕೆಟ್‌ ಪಡೆದರು ಮತ್ತು ಶಹಬಾಜ್‌ ಅಹ್ಮದ್‌ ಒಂದು ವಿಕೆಟ್‌ ಪಡೆದರು.