Mysore
20
overcast clouds

Social Media

ಸೋಮವಾರ, 30 ಡಿಸೆಂಬರ್ 2024
Light
Dark

IPL 2024: ನಾಯಕ ಫಾಫ್‌ ಅರ್ಧಶತಕ: ಆರ್‌ಸಿಬಿಗೆ ಮತ್ತೊಂದು ಗೆಲುವು

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಲ್‌ರೌಂಡರ್‌ ಆಟದ ಮುಂದೆ ಮಂಕಾದ ಗುಜರಾತ್‌ ಟೈಟನ್ಸ್‌ ತಂಡ 4 ವಿಕೆಟ್‌ಗಳ ಅಂತರದ ಹೀನಾಯ ಸೋಲು ಅನುಭವಿಸಿದೆ.

ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 52ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಜಿಟಿ ಎದುರಾಗಿದ್ದವು. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದದ ಗುಜರಾತ್‌ ಜೈಂಟ್ಸ್‌ ನಿಗದಿತ 19.3 ಓವರ್‌ಗಳಲ್ಲಿ ಆಲ್‌ಔಟ್‌ ಆಗಿ 147ರನ್‌ ಗಳಿಸಿ ಆರ್‌ಸಿಬಿಗೆ 148 ರನ್‌ಗಳ ಗುರಿ ನೀಡಿತ್ತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಆರ್‌ಸಿಬಿಗೆ ನಾಯಕ ಫಾಫ್‌ ಡುಪ್ಲೆಸಿ ಅವರ ಅರ್ಧಶತಕದ ನೆರವಿನಿಂದ ಕೇವಲ 13.4 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 152 ರನ್‌ ಕಲೆ ಹಾಕಿ ಗುರಿ ಮುಟ್ಟಿತು.

ಜಿಟಿ ಇನ್ನಿಂಗ್ಸ್‌: ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ನಾಯಕ ಗಿಲ್‌ 2(7) ಹಾಗೂ ವೃದ್ಧಿಮಾನ್‌ ಸಾಹಾ 1(7) ರನ್‌ಗಳಿಸಿ ಔಟಾದರು. ಇವರೊಂದಿಗೆ ಸಾಯ್‌ ಸುದರ್ಶನ್‌ 6(14) ಕೂಡಾ ಬಂದ ದಾರಿಯಲ್ಲೇ ಹಿಂತಿರುಗಿದರು. ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಮಟ್ಟಿಗೆ ಅಬ್ಬರಿಸಿದ ಶಾರುಖ್‌ ಖಾನ್‌ 37(24), ಡೇವಿಡ್‌ ಮಿಲ್ಲರ್‌ 30(20) ಹಾಗೂ ರಾಹುಲ್‌ ತೆವಾಟಿಯಾ 35(21) ರನ್‌ ಗಳಿಸಿ ತಂಡಕ್ಕೆ ಚೇತರಿಕೆಯ ಆಟವಾಡಿದರು.

ಉಳಿದಂತೆ ರಶೀದ್‌ ಖಾನ್‌ 18(14), ವಿಜಯ್‌ ಶಂಕರ್‌ 10(7), ಸುತಾರ್‌ 1(2), ಮೋಹಿತ್‌ ಶರ್ಮಾ ಶೂನ್ಯ ಸುತ್ತಿ ಔಟಾಗುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕೂಡಿಸುವಲ್ಲಿ ಸಹಕರಿಸಿದರು.

ಆರ್‌ಸಿಬಿ ಪರ ವೈಶಾಖ್‌, ಸಿರಾಜ್‌ ಹಾಗೂ ಯಶ್‌ ದಯಾಳ್‌ ತಲಾ 2 ವಿಕೆಟ್‌ ಪಡೆದರು. ಕ್ಯಾಮರೋನ್‌ ಗ್ರೀನ್‌ ಹಾಗೂ ಕರಣ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದು ಗಮನ ಸೆಳೆದರು.

ಆರ್‌ಸಿಬಿ ಇನ್ನಿಂಗ್ಸ್‌: ತವರಿನಂಗಳದಲ್ಲಿ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಆರ್‌ಸಿಬಿಗೆ ನಾಯಕ ಫಾಫ್‌ ಹಾಗೂ ವಿರಾಟ್‌ ಕೊಹ್ಲಿ ಬರ್ಜರಿ ಓಪನಿಂಗ್‌ ನೀಡಿದರು. ಪವರ್‌ ಪ್ಲೇನಲ್ಲಿ ಜಿಟಿ ಬೌಲರ್‌ಗಳನ್ನು ಈ ಇಬ್ಬರು ಆಟಗಾರರು ಮನಬಂದಂತೆ ದಂಡಿಸಿದರು. ನಾಯಕ ಫಾಫ್‌ ಕೇವಲ 18 ಎಸೆತಗಳಲ್ಲಿಯೇ ಅರ್ಧಶತಕ ಪೂರೈಸಿದರು. ಇವರು 23 ಎಸೆತ ಎದುರಿಸಿ 10ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 64 ರನ್‌ ಗಳಿಸಿ ಔಟಾದರು. ಆರ್‌ಸಿಬಿ ಪವರ್‌ ಪ್ಲೇ ನಲ್ಲಿ ಫಾಫ್‌ ವಿಕೆಟ್‌ ಕಳೆದುಕೊಂಡು ಬರೋಬ್ಬರಿ 92 ರನ್‌ ಪೇರಿಸಿತು.

ಭರ್ಜರಿ ಓಪನಿಂಗ್‌ ಸಿಕ್ಕರೂ ಆರ್‌ಸಿಬಿಗೆ ಮಧ್ಯಮ ಕ್ರಮಾಂಕ ಕೈಕೊಟ್ಟಿತು. ವಿಲ್‌ ಜಾಕ್‌ 1(3), ಪಟಿದರ್‌ 2(3) ಹಾಗೂ ಗ್ಲೇನ್‌ ಮ್ಯಾಕ್ಸ್‌ವೆಲ್‌ 4(3) ಹಾಗೂ ಕ್ಯಾಮರೋನ್‌ ಗ್ರೀನ್‌ 1(2) ವಿಕೆಟ್‌ ಕಳೆದುಕೊಂಡ ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಿತು.

ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಮತ್ತೊಂದೆಡೆ ಏಕಾಂಗಿ ಹೋರಾಟ ನೀಡಿದ ವಿರಾಟ್‌ ಕೊಹ್ಲಿ 42(27) ರನ್‌ ಬಾರಿಸಿ ತಂಡಕ್ಕೆ ನೆರವಾದರು. ಬಳಿಕ ಬಂದ ದಿನೇಶ್‌ ಕಾರ್ತಿಕ್‌ 21(12) ಹಾಗೂ ಸ್ವಪ್ನಿಲ್‌ 15(9) ಪಂದ್ಯವನ್ನು ಮುಗಿಸಿ, ಆರ್‌ಸಿಬಿಗೆ ಜಯ ತಂದುಕೊಟ್ಟರು.

ಗುಜರಾತ್‌ ಪರ ಲಿಟ್ಲ್‌ 4 ಹಾಗೂ ನೂರ್‌ ಅಹ್ಮದ್‌ 2 ವಿಕೆಟ್‌ ಪಡೆದರು.

Tags: