Mysore
20
overcast clouds
Light
Dark

IPL 2024: ಆರ್‌ಸಿಬಿಯ ಹೊಸ ಅಧ್ಯಾಯ; ನಿರ್ಣಾಯಕ ಪಂದ್ಯದಲ್ಲಿ ಸಿಎಸ್‌ಕೆ ಸೋಲಿಸಿ ಪ್ಲೇಆಫ್‌ ಪ್ರವೇಶಿಸಿದ ಆರ್‌ಸಿಬಿ

ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 17 ನೇ ಐಪಿಎಲ್ ಆವೃತ್ತಿಯ 68ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 27 ರನ್‌ಗಳ ಗೆಲುವು ಸಾಧಿಸುವುದರ ಮೂಲಕ ಪ್ಲೇಆಫ್‌ ಪ್ರವೇಶಿಸಿದೆ. ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್‌ ಪ್ರವೇಶಿಸಬೇಕಾದರೆ 18 ರನ್‌ಗಳಿಂದ ಗೆಲ್ಲಲೇಬೇಕಾಗಿದ್ದ ಅನಿವಾರ್ಯತೆ ಎದುರಾಗಿದ್ದಾಗ ಈ ಗೆಲುವನ್ನು ಕಂಡಿದ್ದು, ಚೆನ್ನೈ ಸೂಪರ್‌ ಕಿಂಗ್ಸ್‌ ಟೂರ್ನಿಯಿಂದ ಹೊರಬಿದ್ದಿದೆ ಹಾಗೂ ಆರ್‌ಸಿಬಿ ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಪ್‌ ಆರ್ಡರ್‌ನ ಉತ್ತಮ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 218 ರನ್‌ ಕಲೆಹಾಕಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಗೆಲ್ಲಲು 219 ರನ್‌ಗಳ ಗುರಿ ನೀಡಿತು. ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಚೆನ್ನೈ ಸೂಪರ್‌ ಕಿಂಗ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್‌ ಕಲೆಹಾಕಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಕಣಕ್ಕಿಳಿದು ಉತ್ತಮ ಇನ್ನಿಂಗ್ಸ್ ಕಟ್ಟಿಕೊಟ್ಟರು. ಕೊಹ್ಲಿ 47 (29) ರನ್ ಗಳಿಸಿದರೆ, ಡುಪ್ಲೆಸಿಸ್ 54 (39) ರನ್ ಗಳಿಸಿದರು‌. ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ರಜತ್‌ ಪಟಿದಾರ್‌ 41 (23) ರನ್‌ ಮತ್ತು ಕೆಮರಾನ್‌ ಗ್ರೀನ್‌ ಅಜೇಯ 38 (17) ರನ್‌ ಬಾರಿಸಿದರು. ಇನ್ನುಳಿದಂತೆ ದಿನೇಶ್‌ ಕಾರ್ತಿಕ್‌ 14 (6) ರನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ 16 (5) ರನ್‌ ಮತ್ತು ಮಹಿಪಾಲ್‌ ಲೊಮ್ರೊರ್‌ ಒಂದು ಎಸೆತ ಎದುರಿಸಿ ಯಾವುದೇ ರನ್‌ ಗಳಿಸದೇ ಅಜೇಯರಾಗಿ ಉಳಿದರು.

ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಶಾರ್ದೂಲ್‌ ಠಾಕೂರ್‌ 2 ವಿಕೆಟ್ ಮತ್ತು ಮಿಚೆಲ್‌ ಸ್ಯಾಂಟ್ನರ್‌ ಹಾಗೂ ತುಷಾರ್‌ ದೇಶಪಾಂಡೆ ತಲಾ ಒಂದೊಂದು ವಿಕೆಟ್‌ ಪಡೆದರು.

ಚೆನ್ನೈ ಸೂಪರ್‌ ಕಿಂಗ್ಸ್‌ ಇನ್ನಿಂಗ್ಸ್: ಆರ್‌ಸಿಬಿ ನೀಡಿದ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಚೆನ್ನೈ ಪರ ಆರಂಭಿಕರಾಗಿ ನಾಯಕ ರುತುರಾಜ್‌ ಗಾಯಕ್ವಾಡ್‌ ಮತ್ತು ರಚಿನ್‌ ರವೀಂದ್ರ ಕಣಕ್ಕಿಳಿದರು. ರುತುರಾಜ್‌ ಗಾಯಕ್ವಾಡ್‌ ಗೋಲ್ಡನ್‌ ಡಕ್‌ಔಟ್‌ ಆದರೆ, ಅಬ್ಬರಿಸಿದ ರಚಿನ್‌ ರವೀಂದ್ರ 61 (37) ರನ್‌ ಗಳಿಸಿದರು. ಇನ್ನುಳಿದಂತೆ ಡೇರಿಲ್‌ ಮಿಚೆಲ್‌ 4 (6) ರನ್‌, ಅಜಿಂಕ್ಯಾ ರಹಾನೆ 33 (22) ರನ್‌, ಶಿವಮ್‌ ದುಬೆ 7 (15) ರನ್‌, ಮಿಚೆಲ್‌ ಸ್ಯಾಂಟ್ನರ್‌ 3 (4) ರನ್‌, ಶಾರ್ದೂಲ್‌ ಠಾಕೂರ್‌ ಅಜೇಯ 1 (2) ರನ್‌ ಗಳಿಸಿದರು. ಅಬ್ಬರಿಸಿದ ಎಂಎಸ್ ಧೋನಿ 25 (13) ರನ್‌ ಹಾಗೂ ರವೀಂದ್ರ ಜಡೇಜಾ ಅಜೇಯ 42 22) ರನ್‌ ಗಳಿಸಿದರಾದರೂ ತಂಡವನ್ನು ಪ್ಲೇಆಫ್‌ ತಲುಪಿಸಲಾಗಲಿಲ್ಲ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಯಶ್‌ ದಯಾಳ್‌ 2, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮೊಹಮ್ಮದ್‌ ಸಿರಾಜ್‌, ಲಾಕಿ ಫರ್ಗ್ಯುಸನ್‌ ಹಾಗೂ ಕೆಮರಾನ್‌ ಗ್ರೀನ್‌ ತಲಾ ಒಂದೊಂದು ವಿಕೆಟ್‌ ಪಡೆದರು.