Mysore
19
overcast clouds
Light
Dark

ಡಿಕಾಕ್‌ – ರಾಹುಲ್‌ ಜತೆಯಾಟಕ್ಕೆ ತಲೆಬಾಗಿದ ಚೆನ್ನೈ ಸೂಪರ್‌ ಕಿಂಗ್ಸ್‌

ಲಕ್ನೋ: ಇಲ್ಲಿನ ಏಕನ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ 17ನೇ ಐಪಿಎಲ್‌ ಆವೃತ್ತಿಯ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ ‌8 ವಿಕೆಟ್‌ಗಳ ಭರ್ಜರಿ ಗೆಲುವು ಕಂಡಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದ ಲಕ್ನೋ ಸೂಪರ್ ಜೈಂಟ್ಸ್‌ ಫೀಲ್ಡಿಂಗ್‌ ಆರಿಸಿಕೊಂಡು ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿತು. ಚೆನ್ನೈ ಸೂಪರ್ ಕಿಂಗ್ಸ್‌ ರವೀಂದ್ರ ಜಡೇಜಾ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 176 ರನ್‌ ಕಲೆಹಾಕಿ 177 ರನ್‌ಗಳ ಗುರಿಯನ್ನು ನೀಡಿತು. ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಆರಂಭಿಕರಾದ ಡಿಕಾಕ್‌ ಹಾಗೂ ಕೆಎಲ್‌ ರಾಹುಲ್‌ ಭರ್ಜರಿ ಜತೆಯಾಟದ ನೆರವಿನಿಂದ 19 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 180 ರನ್‌ ಕಲೆಹಾಕಿತು.

ಚೆನ್ನೈ ಸೂಪರ್‌ ಕಿಂಗ್ಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ರಚಿನ್‌ ರವೀಂದ್ರ ಗೋಲ್ಡನ್‌ ಡಕ್‌ ಆದರೆ, ಅಜಿಂಕ್ಯಾ ರಹಾನೆ 36 (24) ರನ್‌ ಗಳಿಸಿದರು. ಇನ್ನುಳಿದಂತೆ ರುತುರಾಜ್‌ ಗಾಯಕ್ವಾಡ್‌ 17 (13) ರನ್‌, ಶಿವಮ್‌ ದುಬೆ 3 (8) ರನ್‌, ಸಮೀರ್‌ ರಿಜ್ವಿ 1 (5) ರನ್‌, ಮೊಯಿನ್‌ ಅಲಿ 30 (20) ರನ್‌, ಎಂಎಸ್‌ ಧೋನಿ ಅಜೇಯ 28 (9) ರನ್‌ ಹಾಗೂ ರವೀಂದ್ರ ಜಡೇಜಾ ಅಜೇಯ 57 ( 40 ) ರನ್‌ ಬಾರಿಸಿದರು.

ಲಕ್ನೋ ಸೂಪರ್‌ ಜೈಂಟ್ಸ್‌ ಪರ ಕೃನಾಲ್‌ ಪಾಂಡ್ಯ 2 ವಿಕೆಟ್‌, ಮೊಹ್ಸಿನ್‌ ಖಾನ್‌, ಯಶ್‌ ಠಾಕೂರ್‌, ರವಿ ಬಿಷ್ಣೋಯಿ ಹಾಗೂ ಮಾರ್ಕಸ್‌ ಸ್ಟಾಯಿನಿಸ್ ತಲಾ ಒಂದೊಂದು ವಿಕೆಟ್‌ ಪಡೆದರು.

ಲಕ್ನೋ ಸೂಪರ್‌ಜೈಂಟ್ಸ್‌ ಇನ್ನಿಂಗ್ಸ್‌: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್‌ ಡಿಕಾಕ್‌ ಹಾಗೂ ನಾಯಕ ಕೆಎಲ್‌ ರಾಹುಲ್‌ 134 ರನ್‌ಗಳ ಜತೆಯಾಟವಾಡುವುದರ ಮೂಲಕ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ಡಿಕಾಕ್‌ 54 (43 ) ರನ್‌ ಕಲೆಹಾಕಿದರೆ, ರಾಹುಲ್‌ 82 (53) ರನ್‌ ಬಾರಿಸಿದರು. ಇನ್ನುಳಿದಂತೆ ನಿಕೋಲಸ್‌ ಪೂರನ್‌ ಅಜೇಯ 23 (12) ರನ್‌ ಮತ್ತು ಮಾರ್ಕಸ್‌ ಸ್ಟಾಯಿನಿಸ್‌ ಅಜೇಯ 8 (7) ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಮುಸ್ತಫಿಜುರ್‌ ರಹಮಾನ್‌ ಹಾಗೂ ಮತೀಶ ಪತಿರಾನ ತಲಾ ಒಂದೊಂದು ವಿಕೆಟ್‌ ಪಡೆದರು.